ಗ್ಯಾರಂಟಿ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡಿ – ರಮೇಶ್ ಕಾಂಚನ್
ಉಡುಪಿ: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ಮಾಹಿತಿ ನೀಡುವ ಜತೆಗೆ ವಿವಿಧೆಡೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಗ್ಯಾರಂಟಿ ಯೋಜನೆಯ ಸವಲತ್ತು ಪಡೆಯಲು ಸಮಸ್ಯೆಗಳು ಎದುರಾಗುತ್ತಿದ್ದರೆ ನೇರವಾಗಿ ಕಚೇರಿಗೆ ಭೇಟಿಯಾಗಿ ಮಾಹಿತಿ ಪಡೆಯಬಹುದು. ಇಲ್ಲದಿದ್ದರೆ ಆಯಾ ಇಲಾಖೆಗೆ ಕಚೇರಿಗೆ ತೆರಳಿ ಮಾಹಿತಿ ಪಡೆಯಬಹುದು. ಬಡವರ ಕಣ್ಣೀರು ಒರೆಸುವ, ಸಂಕಷ್ಟ ನಿವಾರಿಸುವ ಕೆಲಸದಲ್ಲಿ ಅಧಿಕಾರಿಗಳಿಗೆ ಸಹಕರಿಸಲು ತಾಲೂಕು ಅನುಷ್ಠಾನ ಸಮಿತಿ ಸಿದ್ಧವಿದೆ ಎಂದು ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದರು.
ಅವರು ಗುರುವಾರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷತೆಯ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿ 42,613ಮಂದಿಯ ನೋಂದಣಿಯಾಗಿದ್ದು ಅಕ್ಟೋಬರ್ ತನಕ 39,993ಮಹಿಳೆಯರ ಖಾತೆಗೆ 7.86ಕೋಟಿ ರೂ. ಜಮೆ ಮಾಡಲಾಗಿದೆ. ಗೃಹ ಲಕ್ಷ್ಮೀ ಯೋಜನೆಯಲ್ಲಿ 11ಮಂದಿಯ ಇಕೆವೈಸಿ ಸಮಸ್ಯೆ, ಜಿಎಸ್ಟಿ ಪಾವತಿದಾರರ ನೆಲೆಯಲ್ಲಿ 1,402ಮಹಿಳೆಯರಿಗೆ ಗೃಹಲಕ್ಷ್ಮಿ ದೊರೆಯುತ್ತಿಲ್ಲ. 760ಎನ್ಪಿಸಿ ಸಮಸ್ಯೆಯಲ್ಲಿ 275ಮಂದಿಯ ಪಟ್ಟಿ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ತಿಳಿಸಿದರು.
ಬ್ಯಾಂಕುಗಳಲ್ಲಿ ಗ್ರಾಹಕರ ವ್ಯವಹಾರಕ್ಕೆ ಭಾಷಾ ಸಮಸ್ಯೆ, ಜನರಿಗೆ ಪಂಚ ಗ್ಯಾರಂಟಿ ಮಾಹಿತಿ ಹಾಗೂ ಸೌಲಭ್ಯ ಒದಗಿಸುವಲ್ಲಿ ಅಂಗನವಾಡಿ ಕಾರ್ಯಕರ್ತರು ಪಕ್ಷ ಭೇದ ಮಾಡಬಾರದು, ಅಸಡ್ಡೆ ಸಲ್ಲದು. ಜನರು ಪಡಿತರವನ್ನು ಹತ್ತಿರದಲ್ಲೇ ಪಡೆದುಕೊಳ್ಳಲು ವ್ಯವಸ್ಥೆಯಾಗಬೇಕು. ನ್ಯಾಯ ಬೆಲೆ ಅಂಗಡಿಗಳಿಗೆ ಪಂಚ ಗ್ಯಾರಂಟಿ ಮಾಹಿತಿಯ ಕರಪತ್ರ, ಬ್ಯಾನರ್, ಸ್ಟಿಕ್ಕರ್ ನೀಡಲು ಆಹಾರ ಇಲಾಖಾಧಿಕಾರಿಗೆ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಸೂಚಿಸಿದರು.
ಗೃಹ ಜ್ಯೋತಿ ಯೋಜನೆಯಡಿ ಉಡುಪಿ, ಮಣಿಪಾಲ, ಕಲ್ಯಾಣಪುರ ವ್ಯಾಪ್ತಿಯಲ್ಲಿ 81,184ಗೃಹ ಬಳಕೆದಾರರ ಪೈಕಿ 66,509ನರಿಗೆ 66ಕೋಟಿ ರೂ. ಉಳಿತಾಯವಾಗಿದೆ ಎಂದು ಮೆಸ್ಕಾಂ ಇಲಾಖಾಧಿಕಾರಿ ತಿಳಿಸಿದರು. ಯುವನಿಧಿಯಡಿ 655ಮಂದಿ ನೋಂದಣಿಯಾಗಿದ್ದು 508ಮಂದಿ ಫಲಾನುಭವಿಗಳಾಗಿದ್ದಾರೆ. ಅಭಿಯಾನದ ಮೂಲಕ ಹೆಚ್ಚಿನ ಸಂಖ್ಯೆಯ ವಿದ್ಯಾವಂತ ನಿರುದ್ಯೋಗಿಗಳ ನೋಂದಣಿಯಾಗಬೇಕು.
ಯುವನಿಧಿ ಪಡೆದವರಿಗೆ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಪಡೆವ ನಿಟ್ಟಿನಲ್ಲಿ ನೆರವಾಗಬೇಕು ಎಂದು ರಮೇಶ್ ಕಾಂಚನ್ ತಿಳಿಸಿದರು.
ಕೋವಿಡ್ ಅವಧಿಯಲ್ಲಿ ಮಲ್ಲಾರು-ಬೆಳಪು, ಉದ್ಯಾವರ-ಪಿತ್ರೋೋಡಿ, ಉಡುಪಿ-ಪಟ್ಲ, ಉಡುಪಿ-ಪಡುಕೆರೆ ಭಾಗದಲ್ಲಿದ್ದ ಬಸ್ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನು ಮರು ಆರಂಭಿಸುವ ಬಗ್ಗೆ ವಿಭಾಗ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಆದರೆ ಚಾಲಕ-ನಿರ್ವಾಹಕರ ಸಮಸ್ಯೆೆಯಿಂದಾಗಿ ಬಾಕಿ ಉಳಿದಿದೆ. ಈಗಾಗಲೇ ನೇಮಕಾತಿ ನಡೆಯುತ್ತಿದ್ದು, ಶೀಘ್ರದಲ್ಲಿ ಹಿಂದಿನಂತೆ ಎಲ್ಲ ರೂಟ್ಗಳಿಗೆ ಬಸ್ ಸಂಪರ್ಕ ಕಲ್ಪಿಸಲು ಆದ್ಯತೆ ನೀಡಲಾಗುವುದು ಎಂದು ಕೆ ಎಸ್ ಆರ್ ರ್ಟಿಸಿ ಸಹಾಯಕ ಸಂಚಾರ ನಿರೀಕ್ಷಕರು ಮಾಹಿತಿ ನೀಡಿದರು.
ಮಂಚಿ, ಬಡಗಬೆಟ್ಟು, ಕುಕ್ಕೆಹಳ್ಳೀ, ಮಲ್ಪೆ, ಕೆಮ್ಮಣ್ಣು, ಮಣಿಪಾಲ ಭಾಗಕ್ಕೂ ಹೆಚ್ಚುವರಿ ಬಸ್ ಕಲ್ಪಿಸಿ ಮಹಿಳೆಯರಿಗೆ ಶಕ್ತಿ ಯೋಜನೆಯ ಸವಲತ್ತು ಸಿಗುವಂತಾಗಬೇಕು. ಅಲೆವೂರು- ಕೆಮ್ತೂರು, ಉಡುಪಿ-ಕಾರ್ಕಳ-ಆಗುಂಬೆ ಭಾಗಕ್ಕೂ ಬಸ್ ಸಂಪರ್ಕ ಒದಗಿಸಲು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ರಮೇಶ್ ಕಾಂಚನ್ ಸೂಚನೆ ನೀಡಿದರು. ಬಸ್ ಸಂಪರ್ಕ ಬೇಕಿರುವ ಗ್ರಾಮಗಳ ನಿವಾಸಿಗಳು ಸಾರಿಗೆ ಇಲಾಖೆಗೆ ಹಾಗೂ ಅಧ್ಯಕ್ಷರಿಗೆ ಮನವಿ ಸಲ್ಲಿಸುವಂತೆ ಸೂಚಿಸಿದರು.
ಮೆಸ್ಕಾಂ ವ್ಯಾಪ್ತಿಯಲ್ಲಿ ಬಿಲ್ ಪಾವತಿ ಕೌಂಟರ್ಗಳನ್ನು ಸ್ಥಗಿತಗೊಳಿಸಿರುವುದರಿಂದ ಹಿರಿಯ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ಈ ಹಿಂದಿನ ಕ್ರಮವನ್ನೇ ಮುಂದುವರಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ತಿಳಿಸಲಾಯಿತು.
ತಾಲೂಕಿನಲ್ಲಿ 5 ಗ್ಯಾರಂಟಿಯ ಪ್ರಗತಿಯ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿಜಯಾ, ತಹಶೀಲ್ದಾರ್ ಗುರುರಾಜ್ ಸಭೆಯಲ್ಲಿದ್ದರು.