ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಮಹಿಳಾ ಕಾಂಗ್ರೆಸ್ ರಸ್ತೆಯಲ್ಲಿ ಒಲೆ ಉರಿಸಿ ಅಡುಗೆ ಮಾಡಿ ಪ್ರತಿಭಟನೆ!
ಉಡುಪಿ: ಸುಳ್ಳನ್ನೇ ಹೇಳಿ ಅಧಿಕಾರ ಪಡೆದ ನರೇಂದ್ರ ಮೋದಿ ಸರಕಾರ ಗ್ಯಾಸ್ ಬೆಲೆಯನ್ನು ಏಕಾಏಕಿ 85 ರೂಪಾಯಿ ಏರಿಸುವುದರ ಮೂಲಕ ಮಹಿಳೆಯರ ಬಗ್ಗೆ ಇರುವ ಕಾಳಜಿ ಏನೆಂಬುದನ್ನು ದೇಶಕ್ಕೆ ತೋರಿಸಿದೆ ಎಂದು ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಹೇಳಿದರು.
ಅವರು ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ಒಲೆಯಲ್ಲಿ ಅಡುಗೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಅಚ್ಚೆ ದಿನ್ ತರುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂದು ಗ್ಯಾಸ್ ಬೆಲೆಯನ್ನು ಏಕಾ ಏಕಿ 85 ರೂಪಾಯಿ ಹೆಚ್ಚಿಸಿದೆ. ಯುಪಿಎ ಸರಕಾರ ಇದ್ದ ಸಮಯದಲ್ಲಿ ಗ್ಯಾಸ್ ಬೆಲೆ 420 ಇದ್ದರೆ ಅದು ಇಂದು 735 ಕ್ಕೆ ಏರಿದೆ. ಆರು ತಿಂಗಳ ಹಿಂದೆ ಗ್ಯಾಸ್ ಬೆಲೆ 457 ಇದ್ದರೆ ಕೇವಲ ಆರು ತಿಂಗಳಲ್ಲಿ 300 ರೂಪಾಯಿಗೂ ಮೀರಿ ದರವನ್ನು ಕೇಂದ್ರ ಸರಕಾರ ಏರಿಸಿದೆ. ಯುಪಿಎ ಸರಕಾರದ ಅವಧಿಯಲ್ಲಿ 5 ರೂಪಾಯಿ ಬೆಲೆ ಏರಿದರೂ ಕೂಡ ಬೀದಿಗಿಳಿಯುತ್ತಿದ್ದ ಬಿಜೆಪಿ ಮಂದಿ ಇಂದು ಮೌನವಾಗಿದ್ದಾರೆ. ಈ ಭಾಗದ ಸಂಸದರು ಸ್ವತಹ ಮಹಿಳೆಯರು ಆಗಿದ್ದು ಅವರಿಗೆ ದೇಶದ ಮಹಿಳೆಯರ ಪರಿಸ್ಥಿತಿ ಅರ್ಥವಾಗದೆ ಇರುವುದು ನಾಚಿಕೆಗೇಡು.
ಸದಾ ಯುಪಿಇ ಸರಕಾರದ ಯೋಜನೆಗಳನ್ನು ಟೀಕುಸುತ್ತಾ ಬಂದಿದ್ದ ಬಿಜೆಪಿಗರು ಯುಪಿಎ ಸರಕಾರ ತಂದ ಆಧಾರ್ ಕಾರ್ಡ್ ನಿರಾಧರ್ ಕಾರ್ಡ್ ಎಂದು ಹೀಳಿಯಾಳಿಸುತ್ತಿದ್ದರು ಆದರೆ ಇಂದು ಡಿಜಿಟಲಿಕರಣದ ಹೆಸರು ಹೇಳಿ ಪ್ರತಿಯೊಂದು ಆಧಾರ್ ಕಾರ್ಡ್ ಬೇಕು ಎನ್ನುತ್ತಿದ್ದಾರೆ. ಗ್ಯಾಸ್ ಸಬ್ಸಿಡಿ ನೀಡುವುದರಲ್ಲಿ ಕೂಡ ಸರಿಯಾಗಿ ವ್ಯವಸ್ಥೆ ಮಾಡದೆ ಇರುವುದು ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ತಾವು ಅಧಿಕಾರಕ್ಕೆ ಬಂದರೆ ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತರುವುದಾಗಿ ಹೇಳಿದ್ದ ಮೋದಿ ಈಗ ನಮ್ಮದೇ ಹಣವನ್ನು ಎಟಿಎಂ ನಿಂದ ನಾಲ್ಕಕ್ಕಿಂತ ಅಧಿಕ ಬಾರಿ ತೆಗೆದರೆ 150 ರೂ ಪಾಯಿ ಶುಲ್ಕವಿಧಿಸುತ್ತಿದೆ. ಹೊಗೆ ಮುಕ್ತ ದೇಶವನ್ನಾಗಿ ಮಾರ್ಪಡಿಸಲು ಹೊರಟಿರುವ ಮೋದಿ ಸರಕಾರ ಗ್ಯಾಸ್ ಬೆಲೆ ಏರಿಸಿ ಮತ್ತೆ ಪುನಃ ಮಹಿಳೆಯರು ಒಲೆಯನ್ನು ನೆಚ್ಚಿಕೊಳ್ಳುವಂತೆ ಮಾಡಿರುವುದು ನಾಚಿಕೆಗೇಡು ಎಂದರು.
ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಜ್ಯೋತಿ ಹೆಬ್ಬಾರ್ ಮಾತನಾಡಿ ಕಾಂಗ್ರೆಸ್ ಸರಕಾರ 60 ವರ್ಷಗಳಲ್ಲಿ ದೇಶವನ್ನು ಲೂಟಿ ಹೊಡೆದಿದೆ ಎನ್ನುವುದಾಗಿ ಆರೋಪ ಮಾಡುತ್ತಿರುವ ಮೋದಿಯವರಿಗೆ ನೋಟ್ ಅಮಾನ್ಯಕರಣ ಮಾಡಿದ 50 ದಿನದ ಲೆಕ್ಕ ನೀಡಲು ಸಾಧ್ಯವಾಗಿಲ್ಲ ಅಂದ ಮೇಲೆ 60 ವರ್ಷದ ಲೆಕ್ಕ ಹೇಗೆ ಮಾಡಿದ್ದು? ಪ್ರತಿ ಭಾಷಣದಲ್ಲೂ ಅಚ್ಚೆ ದಿನ್ ಬಗ್ಗೆ ಮಾತನಾಡುತ್ತಿದ್ದ ಮೋದಿ ಈಗ ಅಚ್ಚೆ ದಿನ್ ಶಬ್ದವನ್ನೇ ಮರೆತು ಬಿಟ್ಟಿದ್ದಾರೆ. ಅವರು ನಡೆಸುತ್ತಿರುವ ಮನ್ ಕಿ ಬಾತ್ ಕಾರ್ಯಕ್ರಮ ಮಂಕಿ ಕಿ ಬಾತ್ ಎಂಬ ದೊಡ್ಡ ಧಾರವಾಹಿ ಆಗುತ್ತಿದೆ. ಮಹಿಳೆಯರ ಪಾಲಿಗೆ ಶಾಪದಂತಾಗಿರುವ ಈ ಮೋದಿ ಸರಕಾರ ಕ್ಯಾಶ್ ಲೆಸ್ಸ್ ನಿಂದ ಒಂದು ದಿನ ಇಂಡಿಯಾವನ್ನೆ ಲೆಸ್ಸ್ ಆಗಿ ಮಾಡುವುರಲ್ಲಿ ಸಂಶಯವಿಲ್ಲ. ಯಾವುದೋ ಒರ್ವ ಮಹೀಳೆ ಮೋದಿಯವರ ಶಾಲು ಚೆನ್ನಾಗಿದೆ ಎಂದು ಹೇಳಿದ ಕೂಡಲೇ ಅವರ ಶಾಲನ್ನೇ ಆ ಮಹಿಳೆಗೆ ಉಡುಗೊರೆಯಾಗಿ ನೀಡುತ್ತಾರೆ ಆದರೆ ತನ್ನ ಸ್ವಂತ ಹೆಂಡತಿಗೆ ಒಂದು ಚಿಕ್ಕ ಶಾಲನ್ನೂ ಕೂಡ ಕನಿಷ್ಟ ಸೌಜನ್ಯ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಲೇವಡಿ ಮಾಡಿದರು. ಒಂದೊಂದು ವಿಷಯದ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಾ ಬಂದಿರುವ ಸರಕಾರ ಗೋಹತ್ಯೆಯ ಬಗ್ಗೆ ಭಾಷಣಗಳನ್ನೇ ಮಾಡುತ್ತಿದ್ದಾರೆ ಆದರೆ ಅವರ ತವರು ನೆಲ ಗುಜರಾತಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ರಫ್ತಾಗುತ್ತಿರುವ ಗೋಮಾಂಸದ ಬಗ್ಗೆ ಮಾತ್ರ ಅವರೂ ಚಕಾರವೆತ್ತುತ್ತಿಲ್ಲ. ಸರ್ವಾಧಿಕಾರಿ ಧೋರಣೆಯ ಮೂಲಕ ದೇಷವನ್ನು ಆಳುತ್ತಿರುವ ಮೋದಿ ದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದರು ಆದರೆ ಈಗ ಬೆಲೆ ಹೆಚ್ಚಳದೊಂದಿಗೆ ಸಾಮಾನ್ಯ ಮಹಿಳೆಯರ ಮೇಲೆಯೇ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತಿದ್ದಾರೆ. ಈ ಕುರಿತು ಮುಂದಿನ ಚುನವಾಣೆಯಲ್ಲಿ ಮಹಿಳಾ ಮತದಾರರು ಸೂಕ್ತ ಪಾಠವನ್ನು ಕಲಿಸಲಿದ್ದಾರೆ ಎಂದರು.
ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಮ್ ಎ ಗಫೂರ್, ಮಹಿಳಾ ನಾಯಕರಾದ ಮೀನಾಕ್ಷಿ ಮಾಧವ, ಸಂಧ್ಯಾ ತಿಲಕ್ ರಾಜ್, ಸೆಲಿನಾ ಕರ್ಕಡ, ಸರಸು ಡಿ ಬಂಗೇರ, ಡಾ ಸುನೀತಾ ಶೆಟ್ಟಿ, ರೋಶನಿ ಒಲಿವೇರ, ಚಂದ್ರೀಕಾ ಕೇಲ್ಕರ್, ಗೀತಾ ವಾಗ್ಳೆ, ಚಂದ್ರಿಕಾ ಶೆಟ್ಟಿ, ಮೇರಿ ಡಿಸೋಜಾ, ಅಮೃತ್ ಶೆಣೈ, ದಿನೇಶ್ ಪುತ್ರನ್, ನಾಗೇಶ್ ಉದ್ಯಾವರ, ರಮೇಶ್ ಕಾಂಚನ್, ನೀರಜ್ ಪಾಟೀಲ್ ಹಾಗೂ ಇತರರು ಉಪಸ್ಥಿತರಿದ್ದರು.