ಗ್ರಾಮ ಪಂಚಾಯತ್ ಮುತ್ತಿಗೆ ಕಾಂಗ್ರೆಸ್ ಪೇರಿತ ಎಂಬ ಅಧ್ಯಕ್ಷರ ಹೇಳಿಕೆ ಖಂಡನೀಯ; ಪ್ರಖ್ಯಾತ್ ಶೆಟ್ಟಿ
ಉಡುಪಿ: ಡಿಸೆಂಬರ್ 27ರಂದು ವೀರ ಮಾರುತಿ ವ್ಯಾಯಾಮ ಶಾಲೆ ಹಾಗೂ ಇತರ ಸಂಘಸಂಸ್ಥೆಗಳು ಮತ್ತು ಗ್ರಾಮಸ್ಥರು ತೆಂಕನಿಡಿಯೂರು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿರುವುದು ಕಾಂಗ್ರೆಸ್ ಪ್ರೇರಿತ ಎಂದು ಗ್ರಾಮಪಂಚಾಯತ್ ಅಧ್ಯಕ್ಷ ಕೃಷ್ಣ ಶೆಟ್ಟಿ ಹೇಳಿರುವುದು ಶ್ರೀ ವೀರಮಾರುತಿ ವ್ಯಾಯಾಮ ಶಾಲೆ, ಗ್ರಾಮದ ಸಂಘಸಂಸ್ಥೆಗಳಿಗೆ ಹಾಗೂ ಗ್ರಾಮಸ್ಥರಿಗೆ ಮಾಡಿದ ಅವಮಾನವಾಗಿದ್ದು ಇದನ್ನು ಖಂಡಿಸುವುದಾಗಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿದ ಅವರು ತಾನು ಕೇವಲ ಪ್ರತಿಭಟನೆಗೆ ಸೀಮಿತನಾಗಿ ಬಂದವನಲ್ಲ ಬದಲಾಗಿ ನಾನು ನಿರಂತರ ಸುಮಾರು 15 ವರ್ಷದಿಂದ ವ್ಯಾಯಾಮ ಶಾಲೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬುದನ್ನು ಗ್ರಾಮಪಂಚಾಯತ್ ಅಧ್ಯಕ್ಷರು ತಿಳಿದುಕೊಳ್ಳಲಿ. ಒಮ್ಮೆ ವ್ಯಾಯಾಮ ಶಾಲೆಯ ರಸ್ತೆಗೆಂದು ಸರಕಾರದ 15 ಲಕ್ಷ ಅನುದಾವನ್ನು ಸಮರ್ಪಕ ರೀತಿಯಲ್ಲಿ ಬಳಸದೇ ಇದ್ದ ಕಾರಣ ತಾಂತ್ರಿಕ ಕಾರಣದಿಂದ ಅನುದಾನ ಹಿಂದೆ ಹೋಗಿರುವುದನ್ನು ಕೂಡ ಗ್ರಾಮ ಪಂಚಾಯತ್ ಅಧ್ಯಕ್ಷರು ಒಪ್ಪಿರುತ್ತಾರೆ ಹಾಗೇಯೇ ಬೇರೆ ಅನುದಾನ ತರಿಸಿ ರಸ್ತೆ ಕಾಮಾಗಾರಿ ಮಾಡಿಸುತ್ತೇನೆ ಎಂದು ಭರವಸೆಯನ್ನು ಹಾಗೂ ಪತ್ರಿಕಾ ಹೇಳಿಕೆಯನ್ನು ಕೂಡ ಈ ಹಿಂದೆ ನೀಡಿರುತ್ತಾರೆ. ಈಗ ಅದರಿಂದ ನುಣುಚಿಕೊಳ್ಳುವ ಪ್ರಯತ್ನದಿಂದ ಈ ಹೇಳಿಕೆಯನ್ನು ಅಧ್ಯಕ್ಷರು ನೀಡಿರುತ್ತಾರೆ.
ಈ ರೀತಿ ವಿರೋಧ ಮಾಧ್ಯಮ ಹೇಳಿಕೆ ನೀಡುವ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಯಾವ ನೈತಿಕತೆಯೂ ಇಲ್ಲ ಹಾಗೂ ಪ್ರಸ್ತುತ ಗ್ರಾಮ ಪಂಚಾಯತ್ ಆಡಳಿತದ 4.5 ವರ್ಷಕ್ಕಿಂತ ಮೊದಲು ಕಾಂಗ್ರೆಸ್ ಪಕ್ಷ 5 ವರ್ಷ ಆಡಳಿತ ನಡೆಸಿತ್ತು. ಅಧ್ಯಕ್ಷರ ಹೇಳಿಕೆಯಂತೆ 10 ವರ್ಷ ಅಲ್ಲ. ಆ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರ ಸಹಕಾರದಿಂದ ತೆಂಕನಿಡಿಯೂರು ಮುಖ್ಯರಸ್ತೆಗೆ 3 ಕೋಟಿ 9 ಲಕ್ಷ ಗ್ರಾಮ ಸಡಕ್ ಯೋಜನೆಯಲ್ಲಿ ಅನುದಾನ, ಗ್ರಾಮ ಪಂಚಾಯತ್ ಎದುರು ಹಾದುಹೋಗುವ ನಬಾರ್ಡ್ – ಪ್ರವಾಸೊದ್ಯಮ ರಸ್ತೆ 1 ಕೋಟಿ 60 ಲಕ್ಷ ಅನುದಾನ, ಬೈಲಕೆರೆ ಮುಖ್ಯರಸ್ತೆ ಕಾಂಕ್ರೀಟ್ ರಸ್ತೆ 2 ಕೋಟಿ 40 ಲಕ್ಷ ನಬಾರ್ಡ್ – ಪ್ರವಾಸೋದ್ಯಮ ಇಲಾಖೆ ಅನುದಾನ, ತೊಟ್ಟಂ ಮುಖ್ಯರಸ್ತೆ ಕಾಂಕ್ರೀಟಿಕರಣಕ್ಕೆ 90 ಲಕ್ಷ ನಬಾರ್ಡ್ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ, ಗ್ರಾಮ ವಿಕಾಸದ ಅನುದಾನದದಿಂದ 1 ಕೋಟಿಯಲ್ಲಿ ಒಳ, ಅಡ್ಡರಸ್ತೆಗಳ ಅಭಿವೃದ್ಧಿ ನಡೆದಿದೆ.
ಕಾಂಗ್ರೆಸ್ ಆಡಳಿತ ಮೊದಲು ಬಿಜೆಪಿ ಪಕ್ಷ ಗ್ರಾಮ ಪಂಚಾಯತ್ ಆಡಳಿತದ ಸಂದರ್ಭದಲ್ಲಿ ಅಂದಿನ ಬಿಜೆಪಿ ನಗರಸಭೆಯ ನೀರನ್ನು ಉಪಯೋಗಿಸಿ ಸುಮಾರು 11 ಲಕ್ಷ ರೂ ಬಿಲ್ ಬಾಕಿ ಇಟ್ಟಿದ್ದು ನಂತರ ಕಾಂಗ್ರೆಸ್ ಪಕ್ಷ ಗ್ರಾಮ ಪಂಚಾಯತ್ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ಅಂದಿನ ನಗರಸಭೆ ಬಿಲ್ ಬಾಕಿಯ ನೆಪವೊಡ್ಡಿ ನಮ್ಮ ಗ್ರಾಮಪಂಚಾಯತಿಗೆ ಕೊಡುವ ನೀರಿನ ಸೌಲಭ್ಯವನ್ನು ಕಡಿತಗೊಳಿಸಿತ್ತು ಆ ಸಂದರ್ಭದಲ್ಲಿ ನಮ್ಮ ತೆಂಕನೀಡಿಯೂರು ಗ್ರಾಮಸ್ಥರು ಬಿಜೆಪಿ ಆಡಳಿತದ ನಗರಸಭೆಗೆ ಮುತ್ತಿಗೆ ಹಾಕಿರುವುದನ್ನು ನೆನಪಿಸಿಕೊಳ್ಳಬಹುದು.
ಆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಗ್ರಾಮದ ಎಲ್ಲಾ ವಾರ್ಡ್ಗಳಿಗೆ ಸಮರ್ಪಕವಾದ ನೀರಿನ ವ್ಯವಸ್ಥೆಗಾಗಿ ಅಗತ್ಯವಿದ್ದಲ್ಲಿ ನೀರಿನ ಪೈಪ್ ಲೈನ್, ಬಾವಿಗಳದ್ದು, ಅನೇಕ ಬೋರ್ ವೆಲ್ ಗಳನ್ನು ಕಾಂಗ್ರೆಸ್ ಗ್ರಾಮಪಂಚಾಯತ್ ಕಲ್ಪಿಸಿತ್ತು ಹಾಗೂ ಪ್ರಮೋದ್ ಮಧ್ವರಾಜ್ ಅವರ ಸಹಕಾರದಿಂದ ಟ್ಯಾಂಕರ್ ಮೂಲಕ ನೀರಿನ ಸರಬರಾಜನ್ನು ಮಾಡಲಾಯಿತು ಇದರಿಂದ ಈಗಲೂ ಕೂಡ ಗ್ರಾಮಸ್ಥರಿಗೆ ನೀರನ ಸಮಸ್ಯೆಯಿಂದ ಮುಕ್ತರಾಗಿದ್ದರೆ ಇದಕ್ಕೆ ಮುಖ್ಯ ಕಾರಣ ಅಂದಿನ ನಮ್ಮ ಕಾಂಗ್ರೆಸ್ ಗ್ರಾಮ ಪಂಚಾಯತ್ ಆಡಳಿತ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.
ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಎಲ್ಲಾ ಮೂಲಭೂತ ಸೌಕರ್ಯ ಸಮರ್ಪಕ ರೀತಿಯಲ್ಲಿ ಕಲ್ಪಿಸಿದೆ ನಂತರ ಬಂದ ಈ 4.5ವರ್ಷ ಬಿಜೆಪಿ ಗ್ರಾಮ ಪಂಚಾಯತ್ ಆಡಳಿತ ಗ್ರಾಮದ ಯಾವುದೇ ಒಂದು ಅಭಿವೃದ್ಧಿಯನ್ನು ಮಾಡದೇ ಗ್ರಾಮದ ಸ್ಮಶಾನದ ದುಸ್ಥಿತಿಗೂ ಕಾರಣವಾಗಿದ್ದು, ದ್ವೇಷದ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿಯನ್ನು ಮಾಡುವ ಬದಲು ಅಸಭ್ಯವಾಗಿ ಇಲ್ಲಸಲ್ಲದ ಹೇಳಿಕೆಯ ಮೂಲಕ ಗ್ರಾಮಸ್ಥರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲು ಯತ್ನಿಸಿ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಅನಗತ್ಯ ಹೇಳಿಕೆಗಳನ್ನು ನೀಡುವ ಬದಲು ಗ್ರಾಮದ ಅಭಿವೃದ್ಧಿ ಕಡೆಗೆ ಅಧ್ಯಕ್ಷರು ಗಮನ ಹರಿಸುವುದು ಸೂಕ್ತ ಎಂದು ಪ್ರಖ್ಯಾತ್ ಶೆಟ್ಟಿ ಹೇಳಿದ್ದಾರೆ.