ಮಂಗಳೂರು: ತುಳು ರಂಗಭೂಮಿಯಿಂದ ತುಳುನಾಡಿನ ಸಂಸ್ಕತಿ ಮತ್ತು ಪರಂಪರೆಯನ್ನು ಕಥಾನಕದ ಸಂದೇಶ ನೀಡುವ ಮೂಲಕ ವಿಶ್ವಮಟ್ಟದಲ್ಲಿ ವಿಶೇಷ ಸ್ಥಾನಮಾನ ಪಡೆದಿದೆ. ಕಿನ್ನಿಗೋಳಿ ವಿಜಯಾ ಕಲಾವಿದರಂತಹ ಗ್ರಾಮೀಣ ಭಾಗದ ತುಳು ಕಲಾವಿದರ ಸಂಘಟನೆಗೆ ನಗರ ಪ್ರದೇಶದಲ್ಲೂ ಅವಕಾಶ ನೀಡಿ ಅವರ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ನಿರ್ಮಿಸಬೇಕು ಎಂದು ಯುವಜನ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಕೆ. ಅಭಯಚಂದ್ರ ಜೈನ್ ಅಭಿಪ್ರಾಯಪಟ್ಟರು.
ಅವರು ಮಂಗಳೂರು ಪುರಭವನದಲ್ಲಿ ಕಿನ್ನಿಗೋಳಿಯ ವಿಜಯಾ ಕಲಾವಿದರು ಪ್ರದರ್ಶಿಸಿದ “ಲೆಕ್ಕ ತತ್ತಿ ಬೊಕ್ಕ” ತುಳು ನಾಟಕದ 50ನೇ ವಿಶೇಷ ಸಂಭ್ರಮದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ತುಳುನಾಡನ್ನು ಉಳಿಸಲು ರಂಗಭೂಮಿಯು ತನ್ನ ಕೊಡುಗೆಯನ್ನು ನೀಡುತ್ತಿದೆ, ತುಳು ನಾಟಕಗಳ ಮೂಲಕ ಕಲಾವಿದರು ಉತ್ತಮ ಸಂದೇಶಗಳನ್ನು ಸಮಾಜದಲ್ಲಿ ನೀಡುವ ಕೆಲಸ ಇಂದಿಗೂ ಗ್ರಾಮೀಣ ಭಾಗದಲ್ಲಿ ಮಾತ್ರ ನಡೆಯುತ್ತಿದೆ ಎಂದು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುವಂಶಿಕ ಅರ್ಚಕ ವೇ.ಮೂ. ಕೆ.ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನವನ್ನು ನೀಡಿದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹರಿನಾಥ್ ಜೋಗಿ ಇವರು ಕಲಾಪೋಷಕರ ನೆಲೆಯಲ್ಲಿ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ, ಯಾದವ ಕೋಟ್ಯಾನ್ ಪೆರ್ಮುದೆ, ಅಶೋಕ್ ಎರ್ಮಾಳ್ರನ್ನು ವಿಶೇಷವಾಗಿ ಸನ್ಮಾನಿಸಿ ಮಾತನಾಡಿ, ಮಂಗಳೂರಿನಲ್ಲಿ ಕಲಾವಿದರಿಗೆ ವಿಶೇಷ ನೆಲೆಯನ್ನು ನೀಡಬೇಕು ಎಂಬ ಉದ್ದೇಶದಿಂದ ಒಂದು ಕೋಟಿ ರೂ.ವೆಚ್ಚದ ನೂತನ ರಂಗವೇದಿಕೆಯನ್ನು ನಿರ್ಮಿಸುವ ಉದ್ದೇಶವಿದ್ದು ಇದರ ತಾಂತ್ರಿಕತೆಯ ಸಹಿತ ನೀಲ ನಕ್ಷೆಯನ್ನು ತಯಾರಿಸಲಾಗುತ್ತಿದೆ ಎಂದರು.
ಲೆಕ್ಕ ತತ್ತಿ ಬೊಕ್ಕ ನಾಟಕದ ರಚನೆಕಾರ ಹರೀಶ್ ಪಡುಬಿದ್ರಿ ಹಾಗೂ ನಿರ್ದೇಶಕ ಜಗದೀಶ್ ಶೆಟ್ಟಿ ಕೆಂಚನಕೆರೆ ಸಹಿತ ನಾಟಕದ ಎಲ್ಲಾ ಕಲಾವಿದರನ್ನು ತಾಂತ್ರಿಕ ವರ್ಗದವರನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ ಗೌರವಿಸಿದರು.
ನಾಟಕದ 50 ಸಂಭ್ರಮದ ವಿಶೇಷ ಅವಲೋಕವನ್ನು ರಂಗ ವಿಮರ್ಶಕ ಕೆ.ಕೆ.ಪೇಜಾವರ ನಡೆಸಿಕೊಟ್ಟರು.
ವೇದಿಕೆಯಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ಕುಮಾರ್ ಹೆಗ್ಡೆ, ಲಕುಮಿ ತಂಡದ ಮುಖ್ಯಸ್ಥ ಕಿಶೋರ್ ಡಿ.ಶೆಟ್ಟಿ, ಎಕ್ಕಸಕ್ಕ ತುಳು ಸಿನಿಮಾದ ನಿರ್ಮಾಪಕ ಚಂದ್ರಹಾಸ ಶೆಟ್ಟಿ, ಮೂಲ್ಕಿ ವಿಜಯಾ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷೆ ಶಮಿನಾ ಜಿ. ಆಳ್ವಾ, ಕಿನ್ನಿಗೋಳಿ ಯಕ್ಷಲಹರಿಯ ಅಧ್ಯಕ್ಷ ಪಿ.ಸತೀಶ್ ರಾವ್, ಕಟೀಲು ಶ್ರೀ ಡೆವಲಪರ್ಸ್ನ ಗಿರೀಶ್ ಶೆಟ್ಟಿ ಪೆರ್ಮುದೆ, ರಂಗ ಸಂಘಟಕ ವಿ.ಜಿ.ಪಾಲ್, ಮೂಲ್ಕಿ ಸುವರ್ಣ ಆಟ್ರ್ಸ್ನ ಚಂದ್ರಶೇಖರ ಸುವರ್ಣ, ಮುಂಬೈ ಉದ್ಯಮಿ ಸದಾಶಿವ ಪೂಜಾರಿ, ಕಿನ್ನಿಗೋಳಿ ಬಂಟರ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಮದಿಮೆ ಸಿನಿಮಾದ ನಿರ್ಮಾಪಕ ಮಾಲಾಡಿ ಬಾಲಕೃಷ್ಣ ಶೆಟ್ಟಿ, ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್, ವಿಜಯಾ ಕಲಾವಿದರ ಸಂಚಾಲಕ ಸಾಯಿನಾಥ ಶೆಟ್ಟಿ ಮುಂಡ್ಕೂರು, ತಂಡದ ನಿರ್ವಾಹಕರಾದ ಲಕ್ಷ್ಮಣ್ ಬಿ.ಬಿ. ಏಳಿಂಜೆ, ಸುಧಾಕರ ಸಾಲ್ಯಾನ್ ಸಂಕಲಕರಿಯ ಮತ್ತಿತರರು ಉಪಸ್ಥಿತರಿದ್ದರು.
ವಿಜಯಾ ಕಲಾವಿದರ ಗೌರವಾಧ್ಯಕ್ಷ ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಸ್ವಾಗತಿಸಿದರು. ಮಾಧ್ಯಮ ಸಂಚಾಲಕ ನರೇಂದ್ರ ಕೆರೆಕಾಡು ವಂದಿಸಿದರು, ಅಧ್ಯಕ್ಷ ಶರತ್ ಶೆಟ್ಟಿ ಸಂಕಲಕರಿಯ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ನಂತರ “ಲೆಕ್ಕ ತತ್ತಿ ಬೊಕ್ಕ” ತುಳುನಾಟಕ ಪ್ರದರ್ಶನಗೊಂಡಿತು.