ಗ್ರಾಮೀಣ ಭಾಗದ ಪತ್ರಕರ್ತರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ-ಸಿದ್ದರಾಜು
ಭಟ್ಕಳ: ಗ್ರಾಮೀಣ ಜನರ ಬದುಕಿನೊಂದಿಗೆ ಬೆರೆತು ಹೋಗಿರುವ ಗ್ರಾಮೀಣ ಭಾಗದ ಪತ್ರಕರ್ತರು ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷ ಸಿದ್ದರಾಜು ಹೇಳಿದರು.
ಅವರು ಪತ್ರಕರ್ತರ ಸಂಘ ಭಟ್ಕಳ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಕಾರವಾರ ಇವರ ಸಹಯೋಗದೊಂದಿಗೆ ತಾಲೂಕಿನ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಭವನದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶ ಮತ್ತು ಭಟ್ಟಾಕಳಂಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಆಗುಹೋಗುಗಳನ್ನು ಸುದ್ದಿರೂಪದಲ್ಲಿ ಹೊರಕ್ಕೆ ತರುವ ಪತ್ರಕರ್ತರ ಮೇಲೆ ಹೊಣೆಗಾರಿಕೆ ಇದೆ. ಪತ್ರಕರ್ತರು ಜನ ಜೀವನದ ಜೀವಾಳವಾಗಿದ್ದಾರೆ, ವಿವಿಧ ನಗರ ಹಾಗೂ ಜಿಲ್ಲಾ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಸಿಗುವ ಸೌಲಭ್ಯಗಳು ಗ್ರಾಮೀಣ ಭಾಗದಲ್ಲಿ ಇಲ್ಲವಾಗಿದೆ. ಜಿಲ್ಲಾ ಮಟ್ಟದ ಪತ್ರಿಕೆಗಳಿಗೂ ಸರಕಾರದ ನೆರವು ಸಾಕಾಗುತ್ತಿಲ್ಲ. ಪತ್ರಕರ್ತರ ಆರ್ಥಿಕ ಸ್ಥಿತಿಗಳ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸಿಕೊಳ್ಳಲಾಗಿದ್ದು, ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಾರಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡುವಾಗ ಬೆಂಗಳೂರಿಗೆ ಹೊರತಾದ ಪ್ರದೇಶಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಸಮಾವೇಶವನ್ನು ಉದ್ಘಾಟಿಸಿದ ಶಾಸಕ ಮಂಕಾಳು ವೈದ್ಯ ಮಾತನಾಡಿ, ಶಾಸಕಾಂಗ, ಕಾರ್ಯಾಂಗದ ತಪ್ಪುಗಳನ್ನು ಗುರುತಿಸಿ ಎಚ್ಚರಿಸುವ ಕೆಲಸವನ್ನು ಪತ್ರಿಕಾರಂಗ ಮಾಡಿಕೊಂಡು ಬಂದಿದೆ. ಪತ್ರಕರ್ತರು ಜನಸಾಮಾನ್ಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವುದರಿಂದ ಪರಿಹಾರ ರೂಪಿಸುವುದು ಸುಲಭ ಸಾಧ್ಯವಾಗುತ್ತದೆ. ಬಡ ವಿದ್ಯಾರ್ಥಿಗಳ ಬಗೆಗಿನ ಕಾಳಜಿಯಿಂದ ಶಿಕ್ಷಣ ಕ್ಷೇತ್ರವೂ ಸುಧಾರಿಸುತ್ತದೆ ಎಂದು ವಿವರಿಸಿದರು.
ಭಟ್ಕಳ ಪತ್ರಕರ್ತರ ಸಂಘದ ಕಾರ್ಡನ್ನು ಅನಾವರಣಗೊಳಿಸಿ ಮಾತನಾಡಿದ ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವು ಸಮಾಜದ ಕೈಗನ್ನಡಿಯಾಗಿದೆ ಎಂದರು. ಇಂಡಿಯನ್ ಜರ್ನಲಿಸ್ಟ ಯೂನಿಯನ್ ಚಂಡೀಘಡದ ರಾಜ್ಯಾಧ್ಯಕ್ಷ ವಿನೋದ ರೊಹಲಿ ಮಾತನಾಡಿ, ಪುಟ್ಟ ತಾಲೂಕುಗಳಲ್ಲಿ ಪತ್ರಕರ್ತರು ಸಂಘಟಿತರಾಗುವುದರಿಂದ ಪತ್ರಕರ್ತರ ಸಮಸ್ಯೆಗಳನ್ನು ಸರಕಾರದ ಮುಂದೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಇಂಡಿಯನ್ ಜರ್ನಲಿಸ್ಟ ಯೂನಿಯನ್ ದೆಹಲಿ ಇದರ ಮಾಜಿ ಅಧ್ಯಕ್ಷ ಸುರೇಶ ಅಕೊರಿ ಮಾತನಾಡಿ, ಇಂದು ದೊಡ್ಡ ಪತ್ರಿಕೆಗಳು ಸಣ್ಣ ಪತ್ರಿಕೆಗಳನ್ನು ತಿಂದು ಬದುಕುತ್ತಿವೆ. ಇದಕ್ಕೆ ಸರಕಾರವೇ ನೆರವು ನೀಡುತ್ತಿದ್ದು, ತಾವು ಇದನ್ನು ಬಲವಾಗಿ ಖಂಡಿಸುವುದಾಗಿ ತಿಳಿಸಿದರು. ಜಿಲ್ಲಾ ದಿನಪತ್ರಿಕೆ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ ಜಿಲ್ಲಾ ಪತ್ರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಕರಾವಳಿ ಮುಂಜಾವು ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಟಿ.ಬಿ.ಹರಿಕಾಂತ, ಮಾಧ್ಯಮ ಕ್ಷೇತ್ರ ಇಂದು ಸಂಕ್ರಮಣದ ಸ್ಥಿತಿಯಲ್ಲಿದೆ. ಹಸಿಬಿಸಿ, ಅರೆಬರೆಯ ಸುದ್ದಿ ಪ್ರಸರಣದ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರವನ್ನು ಋಣಾತ್ಮಕ ದೃಷ್ಟಿಕೋನದಿಂದ ನೋಡಲಾಗುತ್ತಿದ್ದು, ಪತ್ರಕರ್ತರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ. ಸಿನೆಮಾದಲ್ಲಿ ಪತ್ರಕರ್ತರನ್ನು ಜೋಕರುಗಳನ್ನಾಗಿ ಚಿತ್ರಿಸಲಾಗುತ್ತಿದೆ. ಜಗತ್ತಿನ ಎಲ್ಲೇ ಅನಾಹುತ ಸಂಭವಿಸದರೂ ಮರುಕ್ಷಣವೇ ಭಟ್ಕಳದ ಹೆಸರನ್ನು ಜೋಡಿಸುವ ಕೆಲಸ ನಡೆಯುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು. ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಿಲ್ಲಾ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿದರು. ಭಟ್ಕಳ ತಾಲೂಕು ಪಂಚಾಯತ ಅಧ್ಯಕ್ಷ ಈಶ್ವರ ನಾಯ್ಕ ಉಪಸ್ಥಿತರಿದ್ದರು.
ಕರ್ನಾಟಕ ಪತ್ರಕರ್ತರ ಸಂಘ ಬೆಳಗಾವಿ ಇದರ ರಾಜ್ಯಾಧ್ಯಕ್ಷ ಮುರುಗೇಶ್ ಶಿವಪೂಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ಗೌರೀಶ ಶಾಸ್ತ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಟ್ಕಳ ಪತ್ರಕರ್ತರ ಸಂಘದ ಅಧ್ಯಕ್ಷ ವಿಷ್ಣು ದೇವಡಿಗ ಸ್ವಾಗತಿಸಿದರು. ಕಾರ್ಯದರ್ಶಿ ಮನಮೋಹನ ನಾಯ್ಕ ವಂದಿಸಿದರು. ಕನ್ನಡ ಸಾಹಿತ್ಯ ಪರಿಷತ್ ಭಟ್ಕಳ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ, ಶ್ರೀಧರ ಶೇಟ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಗಣಪತಿ ಶಿರೂರುರವರ ಸಂಗೀತ ಸಂಯೋಜನೆಯೊಂದಿಗೆ ದಿ ನ್ಯೂ ಇಂಗ್ಲೀಷ್ ಸ್ಕೂಲ್ ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡಿದರು.