ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಭಾರತಕ್ಕೆ ಭರ್ಜರಿ ಜಯ
ಚಾಂಪಿಯನ್ಸ್ ಟ್ರೋಫಿಯ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯ ದುಬೈನಲ್ಲಿ ನಡೆದಿದ್ದು ಪಾಕ್ ವಿರುದ್ಧ ಭಾರತ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ. ಭಾರತ 45 ಎಸೆತಗಳು ಬಾಕಿ ಇರುವಂತೆ 4 ವಿಕೆಟ್ ನಷ್ಟಕ್ಕೆ 244 ರನ್ ಪೇರಿಸಿ ಗೆಲುವಿನ ನಗೆ ಬೀರಿತು.
ದುಬೈ ಅಂತಾರಾಷ್ಚ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮಹಮದ್ ರಿಜ್ವಾನ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದ ಬಾಬರ್ ಆಜಂ (23 ರನ್) ಮತ್ತು ಇಮಾಮ್ ಉಲ್ ಹಕ್ (10 ರನ್) ಉತ್ತಮ ಆರಂಭ ನೀಡಿದರಾದರೂ ಇಬ್ಬರೂ ಬೇಗನೆ ಪೆವಿಲಿಯನ್ ಸೇರಿಕೊಂಡರು. ಬಾಬರ್ ಆಜಂರನ್ನು ಹಾರ್ದಿಕ್ ಪಾಂಡ್ಯಾ ಔಟ್ ಮಾಡಿದರೆ, ಇಮಾಮ್ ಉಲ್ ಹಕ್ ರನ್ನು ಅಕ್ಸರ್ ಪಟೇಲ್ ಅದ್ಭುತವಾಗಿ ರನೌಟ್ ಮಾಡಿದರು. ಆದರೆ ಬಳಿಕ ಕ್ರೀಸ್ ಗೆ ಬಂದ ಸೌದ್ ಶಕೀಲ್ (62 ರನ್) ಮತ್ತು ನಾಯಕ ಮಹಮದ್ ರಿಜ್ವಾನ್ (46 ರನ್) ರಕ್ಷಣಾತ್ಮಕ ಆಟದ ಮೊರೆ ಹೋದರು. ಪರಿಣಾಮ ಈ ಜೋಡಿ 3ನೇ ವಿಕೆಟ್ ಗೆ 104 ರನ್ ಗಳ ಜೊತೆಯಾಟವಾಡಿದರು. ಈ ಪೈಕಿ ಸೌದ್ ಶಕೀಲ್ ಅರ್ಧಶತಕ ಸಿಡಿಸಿದರೆ, ರಿಜ್ವಾನ್ ಅಕ್ಸರ್ ಪಟೇಲ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಬಳಿಕ ಸೌದ್ ಶಕೀಲ್ ಕೂಡ ಹಾರ್ದಿಕ್ ಪಾಂಡ್ಯಾಗೆ ವಿಕೆಟ್ ಒಪ್ಪಿಸಿದರು.
ಈ ಇಬ್ಬರು ಔಟಾದರ ಬಳಿಕ ಪಾಕಿಸ್ತಾನ ತಂಡದಿಂದ ಅಂತಹ ಪ್ರಭಾವಶಾಲಿ ಬ್ಯಾಟಿಂಗ್ ಮೂಡಿಬರಲಿಲ್ಲ. ಕುಶ್ದಿಲ್ ಶಾ 38 ರನ್ ಗಳಿಸಿ ಪಾಕ್ ಇನ್ನಿಂಗ್ಸ್ ಗೆ ಜೀವ ತುಂಬುವ ಪ್ರಯತ್ನ ಮಾಡಿದರೂ ಅವರಿಗೆ ಇತರೆ ಆಟಗಾರರಿಂದ ಸಾಥ್ ದೊರೆಯಲಿಲ್ಲ. ಅಂತಿಮವಾಗಿ 49.4 ಓವರ್ ನಲ್ಲಿ ಪಾಕಿಸ್ತಾನ 241 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ಕುಲದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯಾ 2, ಹರ್ಷಿತ್ ರಾಣಾ, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
ಪಾಕ್ ನೀಡಿದ 242 ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಉತ್ತಮ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 20 ರನ್ ಗೆ ಔಟಾಗಿ ಪೆವಿಲಿಯನ್ ಸೇರಿದರು. ನಂತರ ಕೊಹ್ಲಿ ಜೊತೆ ಸೇರಿ ಗಿಲ್ ತಾಳ್ಮೆಯ ಬ್ಯಾಟಿಂಗ್ ಮಾಡಿ 46 ರನ್ ಪೇರಿಸಿದರು. ಆದರೆ ಅಬ್ರಾರ್ ಅಹ್ಮದ್ ಬೌಲಿಂಗ್ ನಲ್ಲಿ ಗಿಲ್ ಬೌಲ್ಡ್ ಔಟ್ ಆದರು. ನಂತರ ಶ್ರೇಯಸ್ ಜೊತೆ ಸೇರಿದ ಕೊಹ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದು ಬೌಂಡರಿ ಬಾರಿಸುವ ಶತಕ ಸಿಡಿಸುವುದರ ಜೊತೆ ಭಾರತಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್ ಅರ್ಧ ಶತಕ ಗಳಿಸಿ ಔಟಾದರು. ಪಾಕ್ ಪರ ಶಾಹಿನ್ ಅಫ್ರಿದಿ 2 ವಿಕೆಟ್ ಪಡೆದರೇ ಅಬ್ರಾರ್ ಮತ್ತು ಕುಶ್ದಿಲ್ ತಲಾ 1 ವಿಕೆಟ್ ಪಡೆದಿದ್ದಾರೆ.