ಚಾಮರಾಜನಗರ ‘ವಿಷ’ ಪ್ರಸಾದ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ಇಬ್ಬರ ಬಂಧನ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಲ್ವಾಡಿ ಗ್ರಾಮದ ಮಾರಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ 11 ಭಕ್ತರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ.
ಸುಲ್ವಾಡಿಯ ಕಿಚ್ಚುಕುತ್ತಿ ಮಾರಮ್ಮ ದೇವಸ್ಥಾನದ ಗೋಪುರ ಶಂಕುಸ್ಥಾಪನೆ ಸಮಾರಂಭದಲ್ಲಿ ಈ ಅವಘಡ ಸಂಭವಿಸಿದ್ದು, ಮೃತ ಭಕ್ತರನ್ನು ಗೋಪಿಯಮ್ಮ(35), ಶಾಂತಾ (20) ಪಾಪಣ್ಣ(35) ಹಾಗೂ ಬಾಲಕಿ ಅನಿತಾ(14) ಎಂದು ಗುರುತಿಸಲಾಗಿದೆ.
ಅಸ್ವಸ್ಥಗೊಂಡವರನ್ನೆಲ್ಲ ಕೊಳ್ಳೆಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಆರೋಗ್ಯಾಧಿಕಾರಿ ಡಾ.ಪ್ರಸಾದ್, ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹಾಗೂ ಇನ್ನಿತರ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ರೈಸ್ಬಾತ್ ತಯಾರಿಸಲಾಗಿತ್ತು. ಅದನ್ನು ತಿಂದ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಅಸ್ವಸ್ಥರಾದರು ಎಂಬುದಾಗಿ ತಿಳಿದಿಲ್ಲ ಎಂದು ಕೆಲ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ದೇವಾಲಯದ ಗೋಪುರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ದ್ವೇಷವಿತ್ತು. ಹೀಗಾಗಿ ಒಂದು ಬಣದವರು ಪ್ರಸಾದಕ್ಕೆ ವಿಷಪ್ರಾಶನ ಮಾಡಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಮಧ್ಯೆ, ದೇಗುಲದ ಆವರಣದಲ್ಲಿ ಪ್ರಸಾದ ಸೇವಿಸಿದ್ದ 60ಕ್ಕೂ ಹೆಚ್ಚು ಕಾಗೆಗಳು ಕೂಡ ಸಾವನ್ನಪ್ಪಿದ್ದು, ಬಾತ್ ತಿಂದ ನಾಯಿಗಳು ಸಹ ನರಳಾಡುತ್ತಿವೆ ಎನ್ನಲಾಗಿದೆ.
ಪ್ರಸಾದವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಹನೂರು ಶಾಸಕ ನಾಗೇಂದ್ರ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇಬ್ಬರ ಬಂಧನ
ಕೊಳ್ಳೆಗಾಲ ಪೊಲೀಸರು ಪ್ರಸಾದಕ್ಕೆ ವಿಷ ಪ್ರಾಶನ ಮಾಡಿದ ಆರೋಪದ ಮೇಲೆ ಚಿನ್ನಪ್ಪಿ ಮತ್ತು ಮಾದೇಶ ಎಂಬುವವರನ್ನು ಬಂಧಿಸಿದ್ದಾರೆ.
ಪ್ರಸಾದದಲ್ಲಿ ಕ್ರಿಮಿ ನಾಶಕ ಪತ್ತೆ
ಪ್ರಸಾದದಲ್ಲಿ ಕೀಟನಾಶಕ ಮಿಶ್ರಣ ಕಂಡುಬಂದಿದೆ. ಕೆ.ಆರ್.ಆಸ್ಪತ್ರೆಯಲ್ಲಿ 25 ಅಸ್ವಸ್ಥರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 10 ಅಸ್ವಸ್ಥರನ್ನು ವೆಂಟಿಲೇಟರ್ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೈಸೂರಿನ ವೈದ್ಯ ರಾಜೇಶ್ ತಿಳಿಸಿದ್ದಾರೆ.