ಚುನಾವಣೆ: ದ.ಕ- ಕಾಸರಗೋಡು ಜಿಲ್ಲಾಡಳಿತ ಸಭೆ
ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲಾಡಳಿತ ಸಭೆ ಬುಧವಾರ ಮಂಗಳೂರಲ್ಲಿ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ಅತಿಥಿ ಗೃಹದಲ್ಲಿ ನಡೆದ ಈ ಸಭೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಸೇರಿದಂತೆ ಅಲ್ಲಿನ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಹಣ ಮತ್ತು ಸರಕು ಸಾಗಾಣಿಕೆಯ ವೇಳೆ ಗಡಿ ಪ್ರದೇಶಗಳಲ್ಲಿ ನಿಗಾ ಇಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ನಡುವೆ ಸಮನ್ವಯತೆ ಮೂಡಿಸುವ ದೃಷ್ಠಿಯಿಂದ ಈ ಸಭೆ ಏರ್ಪಡಿಸಲಾಗಿದೆ ಎಂದು ಹೇಳಿದರು.
ಚುನಾವಣಾ ಸಂದರ್ಭದಲ್ಲಿ ಶಂಕಾಸ್ಪದವಾಗಿ ಸಾಗಿಸುವ ಸರಕು ವಾಹನಗಳನ್ನು ತಪಾಸಣೆ ನಡೆಸಲು ಉಭಯ ರಾಜ್ಯಗಳ ಗಡಿ ವ್ಯಾಪ್ತಿಯಲ್ಲಿ ತಪಾಸಣಾ ತಂಡಗಳನ್ನು ನಿಯೋಜಿಸಲಾಗುವುದು. ಚುನಾವಣಾ ದಿನದಂದು ಕೇರಳ ವ್ಯಾಪ್ತಿಯ ನಿವಾಸಿಗಳು ಕರ್ನಾಟಕದಲ್ಲಿ ಬಂದು ನಕಲಿ ಮತದಾನ ಮಾಡದಂತೆ ಎಚ್ಚರವಹಿಸಲಾಗಿದೆ. ಇದಲ್ಲದೆ ಅಕ್ರಮವಾಗಿ ಮರಳು, ಜಾನುವಾರು ಸಾಗಾಟ, ಹವಾಲಾ ಹಣ ಸಾಗಾಟ ಸೇರಿದಂತೆ ಅಕ್ರಮ ಚಟುವಟಿಕೆಗಳ ಮೇಲೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿ ಉಭಯ ರಾಜ್ಯಗಳ ಅಧಿಕಾರಿಗಳ ನಡುವೆ ಸಮನ್ವಯತೆ ಮೂಡಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಮಾತನಾಡಿ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇರಳದ ಗಡಿ ರಸ್ತೆಗಳಲ್ಲಿ 9 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಇದಲ್ಲದೆ ಮಾಹಿತಿಗಳ ವಿನಿಮಯದೊಂದಿಗೆ ಸಮನ್ವಯದಲ್ಲಿ ಉಭಯ ರಾಜ್ಯಗಳ ಪೋಲಿಸರು ಕಾರ್ಯನಿರ್ವಹಿಸಲಿದ್ದಾರೆ. ಗಡಿ ಭಾಗದಲ್ಲಿ ನಕ್ಸಲ್ ಸಂಚಾರದ ಸಾಧ್ಯತೆಗಳಿರುವುದರಿಂದ ಈ ಬಗ್ಗೆಯು ಹೆಚ್ಚಿನ ಭದ್ರತೆಗೆ ಒತ್ತು ನೀಡಲಾಗಿದೆ ಎಂದರು.
ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಮಾತಾನಾಡಿ ಕರ್ನಾಟಕ-ಕೇರಳ ಜಿಲ್ಲಾಡಳಿತ ನಡುವೆ ಸಮರ್ಪಕ ಮಾಹಿತಿ ವಿನಿಮಯ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪೋಲಿಸ್, ಆರ್.ಟಿ.ಒ, ವಾಣಿಜ್ಯ ತೆರಿಗೆ, ಅರಣ್ಯ ಮತ್ತಿತರ ಇಲಾಖೆಗಳ ನಡುವೆ ಹೆಚ್ಚಿನ ಸಮನ್ವತೆಗೆ ಸೂಚಿಸಲಾಗುವುದು. ಗಡಿ ದಾಟಿ ಚುನಾವಣೆ ಅಕ್ರಮಗಳು ಆಗದಂತೆ ಒತ್ತು ನೀಡಲಾಗುವುದು. ಕರಾವಳಿಯ ತೀರದಲ್ಲಿ ಭದ್ರತೆಯ ನಿಗಃ ವಹಿಸಲಾಗುವುದು ಎಂದು ಹೇಳಿದರು.
ಚುನಾವಣೆಯ ಹಿಂದಿನ ದಿನ ಹಾಗೂ ಚುನಾವಣಾ ದಿನದಂದು ಯಾವುದೇ ಅಕ್ರಮಗಳಿಗೆ ಕಾಸರಗೋಡು ವ್ಯಾಪ್ತಿಯಲ್ಲಿ ಅವಕಾಶ ಸಿಗಂದಂತೆ ನೋಡಿಕೊಳ್ಳಲಾಗುವುದು. ಅಕ್ರಮ ಮತದಾನಕ್ಕೆ ಅವಕಾಶವಾಗದಂತೆ ಕಂದಾಯ ಸಿಬ್ಬಂಧಿಗಳು ಗಮನ ಹರಿಸಲಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.