ಚುನಾವಣೆ ಹೊತ್ತಲ್ಲಿ ಕರಾವಳಿಯಲ್ಲಿ ನಕ್ಸಲರ ಚಲನವಲನ: ಮನೆಗೆ ಬಂದು ಊಟ ಮಾಡಿದ ಶಂಕಿತರು
ದಕ್ಷಿಣ ಕನ್ನಡ : ಚುನಾವಣೆ ಹೊತ್ತಲ್ಲಿ ಕರಾವಳಿ ಭಾಗದಲ್ಲಿ ನಕ್ಸಲರ ಚಲನವಲನ ಕಂಡು ಬರುತ್ತಿದೆ. ಇದು ಸಹಜವಾಗಿ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಡಬ ತಾಲೂಕಿನ ಕೊಂಬಾರು ಸಮೀಪದ ಚೆರು ಗ್ರಾಮಕ್ಕೆ ಗರುವಾರ ಸಾಯಂಕಾಲ ನಕ್ಸಲರ ತಂಡ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ.
ನಕ್ಸಲರು ಚೆರು ಗ್ರಾಮದ ಮನೆಯೊಂದಕ್ಕೆ ತೆರಳಿ, ಎರಡು ಗಂಟೆಗಳ ಕಾಲ ಅಲ್ಲೇ ಕಾಲ ಕಳೆದಿದ್ದಾರೆ. ನಂತರ ಅದೇ ಮನೆಯಲ್ಲಿ ಊಟ ಮಾಡಿ ಬಳಿಕ ದಿನಸಿ ಸಾಮಗ್ರಿ ಪಡೆದಿರುವ ಮಾಹಿತಿ ದೊರೆತಿದೆ. ಗ್ರಾಮಕ್ಕೆ ಭೇಟಿ ನೀಡಿದ್ದ ತಂಡದಲ್ಲಿ ಮೋಸ್ಟ್ ವಾಂಟೆಡ್ ವಿಕ್ರಂಗೌಡ, ಲತಾ ಇದ್ದರು ಎಂಬ ಅನುಮಾನ ವ್ಯಕ್ತವಾಗಿದೆ. ವಿಚಾರ ತಿಳಿಯುತ್ತಿದ್ದಂತೆ ನಕ್ಸಲರು ಇದ್ದ ಮನೆಗೆ ನಕ್ಸಲ್ ನಿಗ್ರಹ ಪಡೆ (ANF) ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಚೆರು ಗ್ರಾಮದ ಮನೆಯೊಂದಕ್ಕೆ ಭೇಟಿ ನೀಡಿದ್ದ ನಕ್ಸಲರು ರಾತ್ರಿ 9 ಗಂಟೆಯವರೆಗೂ ಅದೇ ಮನೆಯಲ್ಲಿದ್ದರು ಎಂಬ ಮಾಹಿತಿ ದೊರೆತಿದೆ. ಒಟ್ಟ 6 ಜನ ನಕ್ಸಲರು ಶಸ್ತ್ರಾಸ್ತ್ರ ಸಮೇತರಾಗಿ ಬಂದಿದ್ದರು ಎನ್ನಲಾಗುತ್ತಿದೆ. ಬಳಿಕ ಅದೇ ಪ್ರದೇಶಕ್ಕೆ ಹೊಂದಿಕೊಂಡಿರುವ ಅರಣ್ಯಕ್ಕೆ ತೆರಳಿದ್ದರೆ ಎಂದು ಹೇಳಲಾಗುತ್ತಿದೆ.
2012ರಲ್ಲಿ ಈ ಪ್ರದೇಶದ ಹತ್ತಿರದಲ್ಲೇ ನಕ್ಸಲರ ಶೂಟೌಟ್ ನಡೆದಿತ್ತು. ನಕ್ಸಲರು ಮಾರ್ಚ್ 16 ರಂದು ಕೂಜಿಮಲೆ, ಮಾ.23 ರಂದು ಸುಬ್ರಹ್ಮಣ್ಯದ ಐನೆಕಿದು ಬಂದು ಹೋಗಿದ್ದರು.
ನಕ್ಸಲರು ಫೆಬ್ರವರಿ ತಿಂಗಳಲ್ಲಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಉದಯನಗರದಲ್ಲಿ ಕಾಣಿಸಿಕೊಂಡಿದ್ದರು. ಉದಯನಗರದಲ್ಲಿ ನಕ್ಸಲರ ಓಡಾಟವನ್ನು ಕಂಡ ಸ್ಥಳೀಯ ಶಾಜು ಮಾತನಾಡಿ, ಐವರು ನಕ್ಸಲರು ತಡರಾತ್ರಿ 2.30 ಗಂಟೆಗೆ ಮನೆ ಹತ್ತಿರದಲ್ಲಿ ಹಾದು ಹೋಗಿದ್ದರು. ಮಂಕಿ ಕ್ಯಾಪ್, ಬ್ಯಾಗ್ ಹಾಕಿಕೊಂಡಿದ್ದರು. ಇಬ್ಬರ ಬಳಿ ಕೋವಿ ಇರುವುದನ್ನು ಕಂಡಿದ್ದೇನೆ. ನಾಯಿ ಬೊಗಳಿದ್ದರಿಂದ ಮನೆ ಒಳಗಡೆಯಿಂದ ನೋಡಿದೆ. ಬೆಳಗ್ಗೆ ಎದ್ದವನೆ ಎಎನ್ಎಫ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದ್ದರು.