ಚುನಾವಣೆಯಲ್ಲಿ ಹಿಂದೂ ಪರವಾದ ಸರಕಾರಕ್ಕೆ ಮತ ನೀಡಿ; ಗೋಪಾಲ್ ಜೀ

Spread the love

ಚುನಾವಣೆಯಲ್ಲಿ ಹಿಂದೂ ಪರವಾದ ಸರಕಾರಕ್ಕೆ ಮತ ನೀಡಿ; ಗೋಪಾಲ್ ಜೀ

ಮಂಗಳೂರು: ಮೇ 12ರಂದು ಕರ್ನಾಟಕ ರಾಜ್ಯ ವಿಧಾನ ಸಭೆಯ ಚುನಾವಣೆ ನಡೆಯಲಿದ್ದು ಗೋರಕ್ಷಣೆಯನ್ನು ಪ್ರೋತ್ಸಾಹಿಸುವ, ಹಿಂದು ಹಬ್ಬಗಳ ಆಚರಣೆಗೆ ಎಲ್ಲ ರೀತಿಯ ಅನುಕೂಲ ಕಲ್ಪಿಸುವ, ಧರ್ಮ ಜಾತಿಗಳ ನಡುವೆ ಆತ್ಮೀಯತೆ ನಿರ್ಮಿಸುವ ಹಿಂದು ಪರವಾದ ಸರಕಾರ ತರಬೇಕೆಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಮನವಿ ಮಾಡಿದರು.

ಮಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 5 ವರ್ಷಗಳ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಹಿಂದು ಸಮಾಜ, ಸಂಸ್ಕೃತಿಗಳಿಗೆ ಅಪಚಾರವೆಸಗಿದೆ. ಗೋರಕ್ಷಣೆ, ಮಠ ಮಂದಿರಗಳ ರಕ್ಷಣೆ, ಹಿಂದು ಸಂಸ್ಕೃತಿಗಳ ಸಂರಕ್ಷಣೆಯಲ್ಲಿ ತೊಡಗಿದ್ದ 25 ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರ ಬರ್ಬರ ಹತ್ಯೆಯಾಗಿದೆ. ಅಲ್ಪ ಸಂಖ್ಯಾತರ ತುಷ್ಟೀಕರಣ ಮಿತಿ ಮೀರಿ(ಶಾದಿ ಭಾಗ್ಯ, ಅಲ್ಪಸಂಖ್ಯಾತರ ಮೇಲಿನ ಕೇಸುಗಳು ವಾಪಾಸು ಇತ್ಯಾದಿ), ಹಿಂದುಗಳನ್ನು ದ್ವಿತೀಯ ದರ್ಜೆ ನಾಗರಿಕರಂತೆ ಕಾಣಲಾಗುತ್ತಿದೆ.

ಗಣಪತಿ ವಿಸರ್ಜನೆ, ರಾಮನವಮಿ ಶಿವಜಯಂತಿ ಬಸವ ಜಯಂತಿಯ ಶೋಭಾಯಾತ್ರೆಗಳಿಗೆ ಅನೇಕ ರೀತಿಯ ನಿಯಮಗಳನ್ನು ಹಾಕಿ ತೊಂದರೆ ಕೊಡುವುದು ಮಾತ್ರವಲ್ಲದೇ ಅಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಹಿಂದು ಯುವಕರ ಮೇಲೆ ಬಲವಾದ ಸೆಕ್ಶನ್ ಗಳ ಮೂಲಕ ಕೇಸುಗಳನ್ನು ಹಾಕಿ ಅವರ ಭವಿಷ್ಯವನ್ನು ಹಾಳುಮಾಡಲಾಗಿದೆ.

ಅಲ್ಲದೆ ಧರ್ಮ ಜಾತಿಗಳ ಹೆಸರಿನಲ್ಲಿ ಸಮಾಜವನ್ನು ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುಷ್ಕೃತ್ಯ ನಡೆದಿದೆ. ಹಿಂದು ಮಂದಿರಗಳ ಹಣದ ದುರ್ಬಳಕೆ, ಅರ್ಚಕರ ಸಂಭಾವನೆ ಹೆಚ್ಚಿಸುವ ಬದಲು ಮುಸ್ಲಿಂ ಮುಲ್ಲಾಗಳ ಸಂಬಳ ಹೆಚ್ಚಳಗಳಂತಹ ಅನೇಕ ಹಿಂದು ವಿರೋಧಿ ನೀತಿ ಕೈಗೊಳ್ಳುವುದರ ಮೂಲಕ ಈ ಸರಕಾರವು ಹಿಂದು ವಿರೋಧಿಯಾಗಿದೆ.

ಈ ಚುನಾವಣೆಯಲ್ಲಿ ಕಾಂಗ್ರೆಸ ಪಕ್ಷವು SDPI ಜೊತೆಗೆ ಕೈಜೋಡಿಸಿ ತನ್ನನ್ನು ಮುಸ್ಲಿಂ ಪರ ಮಾತ್ರವಲ್ಲದೇ ಮತಾಂಧತೆಗೆ ಬೆಂಬಲಿಸುವ ಪಕ್ಷವೆಂದು ಸಾಬೀತು ಪಡಿಸಿದೆ ಎಂದರು.


Spread the love