ಜ27 : ಸಂತ ಜೋಸೆಫ್ ಪ್ರಾಥಮಿಕ ಶಾಲೆ ಕಲ್ಯಾಣಪುರ ಶತಮಾನೋತ್ತರ ರಜತ ಮಹೋತ್ಸವ
ಉಡುಪಿ: ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆ ಕಲ್ಯಾಣಪುರ ಇದರ ಶತಮಾನೋತ್ತರ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭ ಜನವರಿ 27 ರಂದು ಶುಕ್ರವಾರ ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ ಸಭಾಭವನದಲ್ಲಿ ಜರುಗಲಿದೆ ಎಂದು ಶಾಲೆಯ ಸಂಚಾಲಕರಾದ ವಂ ಸ್ಟ್ಯಾನಿ ಬಿ ಲೋಬೊ ಹೇಳಿದರು.
ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚಿನ ಅಧೀನ ಸಂಸ್ಥೆಯಾದ ಈ ಶಾಲೆಯು 19 ನೇ ಶತಮಾನದಲ್ಲಿ ಕಲ್ಯಾಣಪುರ ಪರಿಸರದ ಜನರನ್ನು ಅಕ್ಷರಸ್ಥರನ್ನಾಗಿ ಮಾಡಲು ಮಿಲಾಗ್ರಿಸ್ ಚರ್ಚಿನಲ್ಲಿ ಅಂದಿನ ಧರ್ಮಗುರುಗಳು ಆರಂಭಿಸಿದ ವಿದ್ಯಾಸಂಸ್ಥೆ ಬೊಲ್ಕಾಂವ್ ಇಸ್ಕೊಲ್ ಎಂದು ಪ್ರಸಿದ್ದಿ ಪಡೆದಿತ್ತು. ಬಳಿಕ ವಂದನೀಯ ಧರ್ಮಗುರು ಆಲ್ಬರ್ಟ್ ಡಿಸೋಜಾರ ದೂರದರ್ಶಿತ್ವದ ಫಲವಾಗಿ 1892 ರಲ್ಲಿ ಸಂತ ಜೋಸೆಫ್ ಶಾಲೆಯೆಂದು ಸರಕಾರದಿಂದ ಶಾಶ್ವತ ಅನುದಾನಿತ ಶಾಲೆಯಯಾಗಿ ಮಾನ್ಯತೆ ಪಡೆಯಿತು.
ಪ್ರಸ್ತುತ ಸುಮಾರು 350 ವಿದ್ಯಾರ್ಥಿಗಳನ್ನು ಹೊಂದಿರುವ ಶಾಳೆ ಕನ್ನಡ ಮಾಧ್ಯಮ ಶಾಲೆಗಳು ಅವಸಾನದ ಅಂಚಿಗೆ ಸರಿಯುತ್ತಿರುವ ಕಾಲದಲ್ಲೂ ಪರಿಸರದ ಜನತೆಯ ವಿಶ್ವಾಸ ಗಳಿಸಿ ಬ್ರಹ್ಮಾವರ ಶೈಕ್ಷಣಿಕ ವಲಯದಲ್ಲೇ ಅಧಿಕ ಸಂಖ್ಯೆಯ ಮಕ್ಕಳಿರುವ ಕನ್ನಡ ಮಾಧ್ಯಮ ಶಾಲೆ ಎಂಬ ಪ್ರಖ್ಯಾತಿ ಗಳಿಸಿದೆ.
ಶತಮಾನೋತ್ತರ ರಜತ ಮಹೋತ್ಸವ ವರ್ಷದ ಸವಿ ನೆನಪಿಗಾಗಿ ಹಾಗೂ ಮಕ್ಕಳ ಅನುಕೂಲತೆಗಾಗಿ ಹೊಸಕಟ್ಟಡ, ನಿರ್ಮಾಣ ಕಾರ್ಯ, ಕಂಪ್ಯೂಟರ್ ಕೊಠಡಿ, ಸ್ಮಾರ್ಟ್ ತರಗತಿಗಗಳ ನವೀಕರಣ, ಶಾಲಾ ವಾಚನಾಲಯ ಮತ್ತು ಪ್ರಯೋಗ ಶಾಲೆಯ ಆಧುನಿಕರಣ ಕಾರ್ಯ ಹಾಗೂ ಅತಿಥಿ ಶಿಕ್ಷಕರ ಸಂಭಾವನೆಗಾಗಿ ಶಾಶ್ವತ ನಿಧಿಯನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಯೋಜಿಸಿದ ಹೊಸ ಕಟ್ಟಡವು ಮಕ್ಕಳಿಗೆ ಅತೀ ಅವಶ್ಯವಿರುವ 8 ತರಗತಿ ಕೋಣೆಗಳನ್ನು ಹಾಗೂ ಸಭಾಭವನವನ್ನು ಒಳಗೊಂಡಿದ್ದು ಈ ಎಲ್ಲಾ ಯೋಜನೆಗಳಿಗೆ ಸುಮಾರು 125 ಲಕ್ಷ ರೂಪಾಯಿ ಖರ್ಚು ಅಂದಾಜಿಸಲಾಗಿದೆ ಎಂದರು.
ಶತಮಾನೋತ್ತರ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಥೊಲಿಕ್ ಶಿಕ್ಷಣ ಮಂಡಳಿ ಉಡುಪಿ ಇದರ ಕಾರ್ಯದರ್ಶಿಗಳಾದ ವಂ ಲಾರೆನ್ಸ್ ಡಿಸೋಜ ವಹಿಸಲಿದ್ದು, ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಬ್ರಹ್ಮಾವರ ವಲಯ ನಾಗೇಶ್ ಶ್ಯಾನುಭೋಗ್ ಮುಖ್ಯ ಅತಿಥಿಯಾಗಿ ಆಗಮಿಸಿಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷ ಡಾ ನೆರಿ ಕರ್ನೆಲಿಯೊ, ಶಾಲಾ ಮುಖ್ಯೋಪಾಧ್ಯಾಯಿನ ಸಿ.ಸ ಸುಶೀಲ ಮೊಂತೆರೊ, ಹಳೆ ವಿದ್ಯಾರ್ಥಿಗಳಾದ ಬ್ಯಾಪ್ಟಿಸ್ಟ್ ಡಯಾಸ್, ಪ್ರಕಾಶ್ ಉಪಸ್ಥಿತರಿದ್ದರು.