ಜಗದೀಶ್ ಕಾರಂತ ಬಂಧನ ವಿರೋಧಿಸಿ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಮಂಗಳೂರು: ರಾಜ್ಯ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬುಧವಾರ ಕದ್ರಿ ಸರ್ಕಿಟ್ ಹೌಸ್ ಬಳಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಎಚ್ ಪಿ ಕಾರ್ಯದರ್ಶಿ ಶಿವಾನಂದ ಮೆಂಡನ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ನ್ಯಾಯವೇ ಇಲ್ಲದಂತಾಗಿದೆ. ಹಿಂದೂ ನಾಯಕರು ನ್ಯಾಯ ಕೇಳಲು ಹೋದರೆ ಅವರ ಮೇಲೆಯೇ ಕ್ರಿಮಿನಲ್ ಕೇಸು ದಾಕಲಿಸಲಾಗುತ್ತದೆ. ಸರಕಾರ ಪೋಲಿಸ್ ಇಲಾಖೆಯನ್ನು ಉಪಯೋಗಿಸಿಕೊಂಡು ಹಿಂದೂ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕುತ್ತಿದೆ. ಕಾಂಗ್ರೆಸ್ ಸರಕಾರ ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿದ್ದು, ಗೋ ಕಳ್ಳತನ, ಗೋಹತ್ಯೆಯಲ್ಲಿ ಭಾಗಿಯಾಗಿರುವವರನ್ನು ಬಂಧಿಸುವ ಬದಲು ಗೋರಕ್ಷಕರನ್ನು ಬಂಧಿಸುತ್ತಿದೆ. ಸ್ವತಃ ಗೃಹ ಸಚಿವರೇ ಹಿಂದೂ ನಾಯಕ ಜಗದೀಶ್ ಕಾರಂತರನ್ನು ಬಂಧಿಸಲು ಹಾಗೂ ಕೇಸು ಹಾಕಲು ಸೂಚನೆ ನೀಡುತ್ತಾರೆ ಆದರೆ ಸತ್ಯಕ್ಕೆ ಯಾವತ್ತೂ ಕೂಡ ಜಯ ಇದೆ ಎನ್ನುವುದು ನ್ಯಾಯಾಧೀಶರು ಜಗದೀಶ್ ಕಾರಂತರಿಗೆ ಜಾಮೀನು ನೀಡುವುದರ ಮೂಲಕ ತೋರಿಸಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಸಿದ್ದರಾಮಯ್ಯ ಸರಕಾರ ಹಿಂದೂ ನಾಯಕರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದು ಇಂತಹ ವರ್ತನೆ ನಿಲ್ಲಬೇಕು ಹಾಗೂ ಎಲ್ಲರನ್ನು ಸಮಾನರಾಗಿ ಕಾಣುವಂತಾಗಬೇಕು ಎಂದು ಆಗ್ರಹಿಸಿದರು.
ಗೋಪಾಲ್ ಕುತ್ತಾರ್, ಪ್ರವೀಣ್ ಕುತ್ತಾರ್, ವಸಂತ್ ಶೆಟ್ಟಿ, ಸಂದೀಪ್ ಶೆಟ್ಟಿ, ಶರಣ್ ಶೆಟ್ಟಿ, ರವಿ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.