ಜನ ನೆಮ್ಮದಿಯಿಂದಿರಲು ದೇಶಕ್ಕೆ ಮೋದಿ ನಾಯಕತ್ವ ಅಗತ್ಯ: ಅಣ್ಣಾಮಲೈ
ಕುಂದಾಪುರ: ದೇಶದ ಜನರು ಸುಭೀಕ್ಷವಾಗಿರಲು ಹಾಗೂ ಜನ ನೆಮ್ಮದಿಯಿಂದ ಜೀವನ ಸಾಗಿಸಲು ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಅಗತ್ಯ ಇದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹೇಳಿದರು.
ಬಿಜೆಪಿ ಮಂಡಲ ವತಿಯಿಂದ ನೆಹರೂ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಬೃಹತ್ ಬೈಕ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ 11 ಕೋಟಿ ಶೌಚಾಲಯಗಳನ್ನು ಕಟ್ಟಿಸಿದ್ದರೂ, ಕಾಂಗ್ರೆಸ್ ಪಕ್ಷದವರು ಇನ್ನೂ ಚೊಂಬು ಹಿಡಿದುಕೊಂಡು ತಿರುಗುತ್ತಿದ್ದಾರೆ. ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಈ ಬಾರಿಯ ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿಗಳು ಸಚಿವರ ಮನೆಯವರಾಗಿದ್ದಾರೆ. ಈ ರೀತಿಯ ಪರಿವಾರವಾದ ದೇಶದ ಇನ್ಯಾವ ರಾಜ್ಯದಲ್ಲಿಯೂ ಆಗಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷದ ಸ್ವಹಿತಕ್ಕಾಗಿ ಜನ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸುವ ಸಮಯ ಹತ್ತಿರವಾಗಿದೆ ಎಂದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿ, ಪಕ್ಷ ಸಂಘಟನೆ ಹಾಗೂ ರೈತಾಪಿ ಹೋರಾಟಕ್ಕಾಗಿ ತಿಂಗಳುಗಳ ಕಾಲ ತಮಿಳುನಾಡಿನಲ್ಲಿ ಪಾದಯಾತ್ರೆ ಮಾಡಿ, ಇತಿಹಾಸಕ್ಕೆ ಹೊಸ ಬಾಷ್ಯ ಬರೆದಿರುವ, ಯುವ ಮುಖಂಡ ಅಣ್ಣಾಮಲೈ ಅವರು ಇಲ್ಲಿಗೆ ಬಂದು ನಮ್ಮ ಅಭ್ಯರ್ಥಿಯ ಪರ ಮತಯಾಚನೆ ಮಾಡಿರುವುದು ಉಡುಪಿ ಜಿಲ್ಲೆಗೆ ಆನೆ ಬಲ ಬಂದಿದೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ದಕ್ಷ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರ ಸೇವೆ ಜಿಲ್ಲೆಯ ಜನತೆಗೆ ಅಗತ್ಯವಾಗಿದೆ ಎನ್ನುವ ಕಾರಣಕ್ಕಾಗಿ ಅವರನ್ನು ಉಡುಪಿ ಎಸ್ಪಿ ಆಗಿ ಮಾಡಿದ್ದೇ ನಾನು. ಪಕ್ಷದ ಮುಂಚೂಣಿ ನಾಯಕ್ವತದಲ್ಲಿ ಗುರುತಿಸಿಕೊಳ್ಳುತ್ತಿರುವ ಅವರು, ಮುಂದಿನ ದಿನಗಳಲ್ಲಿ ಕೇಂದ್ರ ಸಚಿವರಾಗಿ, ತಮಿಳುನಾಡು ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಲಿ ಎಂದರು.
ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ಕುಮಾರ ಶೆಟ್ಟಿ, ಮಂಗಳೂರು ಸಹ ಪ್ರಭಾರಿ ರಾಜೇಶ್ ಕಾವೇರಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ ಶೆಟ್ಟಿ ಬಿಲ್ಲಾಡಿ, ಬಿಜೆಪಿ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್, ಸತೀಶ್ ಪೂಜಾರಿ ವಕ್ವಾಡಿ, ಪ್ರಮುಖರಾದ ಸುಪ್ರಸಾದ ಶೆಟ್ಟಿ ಬೈಕಾಡಿ, ನಯನಾ ಗಣೇಶ್, ಶಂಕರ ಅಂಕದಕಟ್ಟೆ ಮೊದಲಾದವರು ಇದ್ದರು. ಮಾಬುಕಳದಿಂದ ಕುಂದಾಪುರ ವರೆಗೆ ಸಾವಿರಾರು ಬೈಕ್ಗಳಲ್ಲಿ ಬಿಜೆಪಿ ಕಾರ್ಯಕರ್ತರು ರ್ಯಾಲಿಯಲ್ಲಿ ಆಗಮಿಸಿದ್ದರು.