ಜನ ಸೇವೆಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಯವರನ್ನು ಗೆಲ್ಲಿಸಿ ಡಿ.ಕೆ ಶಿವಕುಮಾರ್
ಬೆಳ್ತಂಗಡಿ: ‘ಕಾಂಗ್ರೆಸ್ ಪಕ್ಷ ಜನಸಾಮಾನ್ಯರ ಬದುಕಿನ ಅಭಿವೃದ್ಧಿಯ ಬಗ್ಗೆ ಸದಾ ಚಿಂತಿಸುವ, ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವ ಪಕ್ಷವಾಗಿದೆ. ಜನರ ಸೇವೆ ಮಾಡುವ ಜನ ಸೇವಕನಾಗಲು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದರು.
ಇಲ್ಲಿನ ಬಸ್ ನಿಲ್ದಾಣದ ಅಂಬೇಡ್ಕರ್ ಭವನದ ಬಳಿ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈಯವರ ಪರ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಂಗ್ರೆಸ್ ಗೆಲುವಿಗೆ ಕಾರ್ಯಕರ್ತರೇ ರೂವಾರಿಗಳಾಗಿದ್ದು, ಅವರಿಂದಲೇ ಇದುವರೆಗೆ ಪಕ್ಷ ಅಧಿಕಾರಕ್ಕೆ ಬಂದಿದೆ. ಕರಾವಳಿಯಲ್ಲಿ ಅಭಿವೃದ್ಧಿಯ ಚಿಂತನೆಯಲ್ಲಿ ಜನತೆ ಬದಲಾವಣೆಯನ್ನು ಬಯಸಿದ್ದು, ಅದಕ್ಕಾಗಿ ಯುವ ನಾಯಕತ್ವವನ್ನು ಹೊಂದಿದ ಸಮಾಜದ ಬಗ್ಗೆ ಚಿಂತನೆಯನ್ನು ಮಾಡುತ್ತಿರುವ ಯುವ ನಾಯಕ ಮಿಥುನ್ ರೈ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರನ್ನು ನಾಯಕನಾಗಲು ಬಿಡುವುದಿಲ್ಲ. ಬದಲಾಗಿ ಜನರ ಸೇವಕನಾಗಲು ಕಾಂಗ್ರೆಸ್ ಬಯಸುತ್ತದೆ’ ಎಂದು ತಿಳಿಸಿದರು.
‘ನೋಟ್ ಬ್ಯಾನ್ ಮೂಲಕ ಎಲ್ಲ ಧರ್ಮದವರು ಆರಾಧಿಸುವ ಲಕ್ಷ್ಮೀ ದೇವಿಯನ್ನೇ ಅವಮಾನಿಸುವ ಕಾರ್ಯವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮಾತನಾಡಿ, ‘ದೇಶದ ಸಂಸ್ಕೃತಿ, ಸಂಸ್ಕಾರ ಉಳಿಯಬೇಕಾದರೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತೆರಳಿ, ಅಲ್ಲಿನ ಮುಖಂಡರೊಬ್ಬರ ಜನ್ಮದಿನದಲ್ಲಿ ಭಾಗವಹಿಸಿ, ಸಂಭ್ರಮ ಆಚರಿಸಲು ಸಮಯವನ್ನು ಮೀಸಲಿಡುತ್ತಾರೆ. ಆದರೆ ದೇಶಕ್ಕಾಗಿ ಪ್ರಾಣತೆತ್ತ ಸೈನಿಕರ ಕುಟುಂಬದ ಮನೆಗೆ ಹೋಗಲು ಇವರಿಗೆ ಸಮಯವಿಲ್ಲ. ಇಂಥವರಿಗೆ ದೇಶದ ಜನತೆಯೇ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ‘ಬಿಜೆಪಿ ಅಪಪ್ರಚಾರದಿಂದಲೇ ಜನರನ್ನು ಮೋಸಗೊಳಿಸುತ್ತಿದ್ದು, 5 ವರ್ಷದಲ್ಲಿ ನಿಜಾಂಶ ಜನರಿಗೆ ತಿಳಿದಿದೆ. ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ’ ಎಂದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ‘ಕರಾವಳಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿ ಶೂನ್ಯವಾಗಿದೆ. ಸುಳ್ಳು ಭರವಸೆಗಳನ್ನು ನೀಡಿ ಬಿಜೆಪಿ ಸಂಸದರು ಕಾಲ ಕಳೆದಿದ್ದಾರೆ. ಕರಾವಳಿಯ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಮಿಥುನ್ ರೈಯವರನ್ನು ಸೂಕ್ತ ಅಭ್ಯರ್ಥಿಯನ್ನಾಗಿ ಆಯ್ಕೆಗೊಳಿಸಿದ್ದು, ಕರಾವಳಿಯ ಅಭಿವೃದ್ಧಿಯ ದೃಷ್ಟಿಯಿಂದ ಇವರನ್ನು ಗೆಲ್ಲಿಸಬೇಕಾಗಿದೆ’ ಎಂದರು.
ಮಾಜಿ ಶಾಸಕ ಕೆ. ವಸಂತ ಬಂಗೇರ ಮಾತನಾಡಿ, ‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಸಂದರ್ಭದಲ್ಲಿ 165 ಭರವಸೆಗಳನ್ನು ನೀಡಿದ್ದು, ನಿಗದಿತ ಸಮಯದೊಳಗೆ ಈಡೇರಿಸಿದ ಏಕೈಕ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವು ನೋಟ್ ಬ್ಯಾನ್ ಮಾಡುವ ಮೂಲಕ ದೇಶದ ಜನರನ್ನು ಸಂಕಷ್ಟಕ್ಕೆ ತಳ್ಳಿದಲ್ಲದೇ, ಜಿಎಸ್ಟಿ ಜಾರಿಗೊಳಿಸುವ ಮೂಲಕ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ದೇಶದ ಜನ ನೆಮ್ಮದಿಯಿಂದ ಬದುಕಲು ಕಾಂಗ್ರೆಸ್ಗೆ ಮತ ನೀಡಬೇಕು’ ಎಂದರು.
ಮಾಜಿ ಸಚಿವ ಗಂಗಾಧರ ಗೌಡ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಪಕ್ಷದ ಅಭ್ಯರ್ಥಿ ಮಿಥುನ್ ರೈ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ರಂಜನ್ ಜಿ. ಗೌಡ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಬಳಿಕ ಮಾತನಾಡಿದ ಅವರು, ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದುಡಿಯುವುದಾಗಿ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಪಿತಾಂಬರ ಹೇರಾಜೆ, ಜಿ.ಎ. ಬಾವ, ಕಣಚ್ಚೂರು ಮೋನು, ನವೀನ್ಚಂದ್ರ ಶೆಟ್ಟಿ, ಅಭಿನಂದನ್ ಹರೀಶ್ ಕುಮಾರ್, ರಾಜಶೇಖರ್ ಅಜ್ರಿ, ಪ್ರಭಾ ಆಳ್ವ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಜೆಡಿಎಸ್ ಮುಖಂಡ ಜಗನ್ನಾಥ್ ಗೌಡ ಅಡ್ಕಾಡಿ ಉಪಸ್ಥಿತರಿದ್ದರು.
ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಕಿಣಿ ಸ್ವಾಗತಿಸಿದರು. ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ ವಂದಿಸಿದರು. ಕೇಶವ ಗೌಡ ಬೆಳಾಲು, ಮನೋಹರ್ ಕುಮಾರ್ ಇಳಂತಿಲ, ರಾಜಶೇಖರ್ ಶೆಟ್ಟಿ ಮಡಂತ್ಯಾರು ಕಾರ್ಯಕ್ರಮ ನಿರೂಪಿಸಿದರು.