‘ಜನತಾ ಕರ್ಫ್ಯೂ’ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಮಲ್ಪೆಯ ಬೀಚ್
ಉಡುಪಿ: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯ ಕರೆಯಂತೆ ‘ಜನತಾ ಕರ್ಫ್ಯೂ’ಗೆ ಉಡುಪಿ ಜಿಲ್ಲೆಯ ಜನತೆ ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ನೀಡಿದ್ದು, ವಿಶ್ವಪ್ರಸಿದ್ದ ಮಲ್ಪೆಯ ಬೀಚ್ ಪ್ರವಾಸಿಗರಲ್ಲಿದೆ ಬಿಕೋ ಎನ್ನುತ್ತಿದೆ.
ಜಿಲ್ಲೆಯ ಜನರು ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಬೆಳಗ್ಗೆ 7ರಿಂದಲೇ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ. ವಾರದ ಹಿಂದೆಯೇ ಮಾಲ್ಗಳು, ಚಲನಚಿತ್ರ ಮಂದಿರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರಕಾರ ನಿರ್ಬಂಧ ಹೇರಿತ್ತು. ರವಿವಾರ ಜನತಾ ಕರ್ಫ್ಯೂಗೆ ಬೆಂಬಲ ನೀಡುವಂತೆ ಪ್ರಧಾನಿ ಕರೆ ನೀಡಿದ ಮೇರೆಗೆ ಮಲ್ಪೆಯ ಮೀನುಗಾರಿಕಾ ಬಂದರು ಹಾಗೂ ಮಲ್ಪೆಯ ಬೀಚ್ ಸಂಪೂರ್ಣ ಸ್ತಬ್ಧವಾಗಿದೆ.
ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಮಲ್ಪೆ ಬಸ್ಸು ನಿಲ್ದಾಣ, ಮಲ್ಪೆ ಬೀಚ್ ಸಂಪರ್ಕಿಸುವ ರಸ್ತೆಗಳು, ಕೊಡವೂರು ರಸ್ತೆಗಳು ಜನಸಂಚಾರವಿಲ್ಲದೆ ಸಂಪೂರ್ಣ ಖಾಲಿಯಾಗಿವೆ. ಬೆಳಿಗ್ಗೆಯಿಂದಲೇ ಹೋಟೆಲ್ ಗಳು, ಅಂಗಡಿಗಳು ಸಂಪೂರ್ಣ ಮುಚ್ಚಿ ಬೆಂಬಲ ಸೂಚಿಸಿವೆ.