ಜನತೆಯ ಆರೋಗ್ಯ, ಸರಕಾರದ ಜವಾಬ್ದಾರಿ- ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಮಂಗಳೂರು: ರಾಜ್ಯದ ಪ್ರತಿಯೊಂದು ಪ್ರಜೆಯ ಆರೋಗ್ಯ ಕಾಪಾಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಹಾಗೂ ದ.ಕ ಜಿಲ್ಲಾ ಉಸ್ತವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಬಜ್ಪೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನಡೆಸಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಈ ಭಾಗದ ಜನತೆಯ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಬೇಕು. ಸಿಬ್ಬಂದಿ ಕೊರತೆ, ಲ್ಯಾಬ್ ಇನ್ನಿತರ ಮೂಲಭೂತ ಕೊರತೆಗಳಿದ್ದ್ದರೆ ಅಥವಾ ಹೆಚ್ಚುವರಿ ವ್ಯವಸ್ಥೆಗಳ ಅಗತ್ಯವಿದ್ದರೆ ಸರಕಾರದ ಜೊತೆ ಮಾತನಾಡಿ ಪರಿಹಾರ ಮಾಡುವ ಭರವಸೆ ನೀಡಿದರು. ದ.ಕ ಹಾಗೂ ಉಡುಪಿ ಜಿಲ್ಲೆಯ ಅಧಿಕ ಜನ ಖಾಸಗಿ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ. ಆದುದರಿಂದ ವೈದ್ಯರು ಜನತೆಯ ನಂಬಿಕೆಗೆ ಪಾತ್ರರಾಗಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ತಮ್ಮಲ್ಲಾದ ಉತ್ತಮ ಸೇವೆ ನೀಡಿ. ಸರಕಾರದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿ ಎಂದರು.
ಸಾಮಾನ್ಯ ಜನತೆಯ ಆರೋಗ್ಯ ಸುಧಾರಣೆ ಮಾಡುವುದು ಸರಕಾರದ ಮುಖ್ಯ ಆಶಯವಾಗಿದೆ. ಜನತೆ ಆಸ್ಪತ್ರೆ ಕಟ್ಟಡ ನೋಡಿ ಬರುವುದಿಲ್ಲ, ವೈದ್ಯರ ಕಾಲಜಿ ನೋಡಿ ಬರುತ್ತಾರೆ. ಆದುದರಿಂದ ವೈದ್ಯರು ಆಸ್ಪತ್ರೆಗೆ ಬರುವಂತಹ ರೋಗಿಗಳೊಂದಿಗೆ ಸ್ನೇಹ ಭಾವದಿಂದ ಮಾತನಾಡಿ, ಉತ್ತಮ ಚಿಕಿತ್ಸೆ ನೀಡಿ ಬೇಗನೆ ಗುಣಮುಖರಾಗುವಲ್ಲಿ ಸಹಕರಿಸಬೇಕು ಎಂದು ಸಚಿವರು ಹೇಳಿದರು.
ಶಾಸಕ ಯು.ಟಿ ಖಾದರ್ ಮಾತನಾಡಿ, ಸರಕಾರದಿಂದ 420 ರೋಗಗಳಿಗೆ ಔಷಧಿ ಉಚಿತವಾಗಿ ದೊರೆಯುತ್ತಿದೆ. ಸರಕಾರ ನೀಡುವ ಸೌಲಭ್ಯಗಳು ಸೂಕ್ತ ಫಲಾನುಭವಿಗಳಿಗೆ ತಲುಪಲಿ. ಪ್ರಾಥಮಿಕ ಆರೊಗ್ಯ ಕೇಂದ್ರಗಳು ಚಿಕಿತ್ಸೆಯ ಜೊತೆಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ನಡೆಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 1953ರಲ್ಲಿ 2.20 ಎಕ್ರೆ ಸ್ಥಳ ದಾನ ನೀಡಿರುವಂತಹ ಶಿವ ಯಾನೆ ಸೋಮಶೇಖರ ಶೆಟ್ಟಿ ಇವರ ಹೆಸರು ಶಾಶ್ವತವಾಗಿ ಜನತೆಯ ಮನಸ್ಸಲ್ಲಿ ಉಳಿಯುವಂತೆ ಸ್ಮಾರಕ ನಿರ್ಮಿಸಬೇಕು ಎಂದು ಶಾಸಕರು ಹೇಳಿದರು.
ಬಜ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ಸಿ.ಸಿ ಟಿವಿ ಅಳವಡಿಸಲು ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಇವರು ತಮ್ಮ ಅನುದಾನದಿಂದ ರೂ 1 ಲಕ್ಷ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ರೂ 145 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ ಬಜ್ಪೆ ಜನತೆಗೆ ದೊರಕಿದೆ ಇದರ ಸದುಪಯೋಗ ಪಡೆದುಕೊಳ್ಳಿ. ಸರಕಾರದ ಸೇವೆಯಲ್ಲಿರುವ ವೈದ್ಯರು ಜನಪರವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ ರಾಮಕೃಷ್ಣ ರಾವ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.