ಜನವರಿ 3 ರಿಂದ ರಸ್ತೆ ನಿರ್ಮಾಣಕ್ಕಾಗಿ ಶಿರಾಡಿ ಘಾಟ್ ಬಂದ್
ಮಂಗಳೂರು: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ ಜ.3ರಿಂದ 4 ತಿಂಗಳ ಕಾಲ ವಾಹನ ಸಂಚಾರ ಬಂದ್ ಆಗಲಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟಿಯಲ್ಲಿ 12.5 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ವಾಹನ ಸಂಚಾರ ನಿರ್ಬಂಧಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ.
ರಾಜಧಾನಿ ಮತ್ತು ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಹೆದ್ದಾರಿ ಪದೇ ಪದೇ ಹಾಳಾಗುತ್ತಿದ್ದು, ಅದನ್ನು ತಡೆಯಲು 26 ಕಿ.ಮೀ ಕಡಿದಾದ ಘಾಟಿಯಲ್ಲಿ ಕಾಕ್ರೂಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಮೊದಲ ಹಂತದ 13 ಕಿ.ಮೀ ಕಾಂಕ್ರೀಟ್ ರಸ್ತೆ ಕಾಮಗಾರಿ 2015ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿದೆ. ಈಗ ₹ 90.27 ಕೋಟಿ ವೆಚ್ಚದ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ.
ಕೆಂಪುಹೊಳೆ ಸೇತುವೆಯಿಂದ ಅಡ್ಡಹೊಳೆ ಸೇತುವೆ ತನಕ (ಕಿ.ಮೀ 250.62ಯಿಂದ ಕಿ.ಮೀ 263 ತನಕ)12.5 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗೆ ತಿಳಿಸಿದರು.
ಜೂನ್‌ನಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರ ಪುನರಾರಂಭಕ್ಕೆ ಅವಕಾಶ ಮಾಡಿಕೊಡಬೇಕು. ಹೀಗಾಗಿ ಕಾಮಗಾರಿ ಗುತ್ತಿಗೆ ಪಡೆದಿರುವ ಜಿ.ವಿ.ಆರ್. ಇನ್‌ಫ್ರಾ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಏಪ್ರಿಲ್ 15ರ ಕಾಲಮಿತಿ ನಿಗದಿ ಮಾಡಲಾಗಿದೆ ಎಂದೂ ಅಧಿಕಾರಿಗಳು ವಿವರಿಸಿದರು.
73 ಕಿರು ಸೇತುವೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಂಕ್ರೀಟ್ ರಸ್ತೆಗೆ ಅಗತ್ಯವಿರುವ ಜಲ್ಲಿ, ಮರಳು, ಸಿಮೆಂಟ್ ಸೇರಿ ಕಚ್ಚಾ ವಸ್ತುಗಳನ್ನು ಗುತ್ತಿಗೆದಾರರು ಶೇ 60ರಷ್ಟು ಸಂಗ್ರಹಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಕಾಂಕ್ರೀಟ್ ರಸ್ತೆ ನಿರ್ಮಾಣದ ವೇಳೆ 2015ರ ಜನವರಿಯಿಂದ ಆಗಸ್ಟ್ ತನಕ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಏಳು ಪರ್ಯಾಯ ಮಾರ್ಗಗಳು
* ಬೆಂಗಳೂರು– ಹಾಸನ, ಬೇಲೂರು, ಮೂಡಿಗೆರೆ, ಚಾರ್ಮಾಡಿ ಘಾಟಿ, ಬಿ.ಸಿ.ರಸ್ತೆ (366 ಕಿ.ಮೀ)
* ಬೆಂಗಳೂರು– ಹಾಸನ, ಸಕಲೇಶಪುರ, ಹಾನಬಾಳ್, ಚಾರ್ಮಾಡಿ ಘಾಟಿ, ಬಿ.ಸಿ.ರಸ್ತೆ (360 ಕಿ.ಮೀ)
* ಬೆಂಗಳೂರು– ಹಾಸನ, ಕೆ.ಆರ್.ನಗರ, ಹುಣಸೂರು, ಮಡಿಕೇರಿ, ಪುತ್ತೂರು, ಬಿ.ಸಿ.ರಸ್ತೆ (375 ಕಿ.ಮೀ)
* ಬೆಂಗಳೂರು– ಮೈಸೂರು, ಮಡಿಕೇರಿ, ಪುತ್ತೂರು, ಬಿ.ಸಿ. ರಸ್ತೆ (476
* ಬೆಂಗಳೂರು- ನೆಲಮಂಗಲ, ಶಿವಮೊಗ್ಗ, ಹೊನ್ನಾವರ, ಮುರುಡೇಶ್ವರ, ಕುಂದಾಪುರ, ಉಡುಪಿ (494 ಕಿ.ಮೀ)
* ಬೆಂಗಳೂರು-ಹಾಸನ, ಮೂಡಿಗೆರೆ, ಕೊಟ್ಟಿಗೆಹಾರ, ಕಳಸ, ಕುದುರೆಮುಖ, ಕಾರ್ಕಳ, ಉಡುಪಿ (417 ಕಿ.ಮೀ)
* ಬೆಂಗಳೂರು-ಶಿವಮೊಗ್ಗ, ಆಯನೂರು, ಹೊಸನಗರ, ಮಾಸ್ತಿಕಟ್ಟೆ, ಹೊಸಂಗಡಿ, ಸಿದ್ಧಾಪುರ, ಕುಂದಾಪುರ(457 ಕಿ.ಮೀ)