ಜನಾರ್ದನ ಪೂಜಾರಿ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿಯಲು ನೆರವಾದ ರಾಹುಲ್ ಗಾಂಧಿ
ಮಂಗಳೂರು: ಶುಕ್ರವಾರ ನಡೆದ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಸಮಾರಂಭಕ್ಕೆ ಪಕ್ಷದ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿಯವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೈ ಹಿಡಿದು ವೇದಿಕೆಯಿಂದ ಕೆಳಗಿಳಿಸಿಲು ನೇರವಾದ ಘಟನೆಗೆ ಟಿ.ಎಂ.ಎ. ಪೈ ಸಭಾಂಗಣ ಸಾಕ್ಷಿಯಾಯಿತು.
ಅನಾರೋಗ್ಯದ ಕಾರಣದಿಂದ ಪೂಜಾರಿ ಹಲವು ದಿನಗಳಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಳ್ಳುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕಾಂಗ್ರೆಸ್ ಮುಖಂಡರು ಪೂಜಾರಿ ಅವರಿಗೆ ಮನವಿ ಮಾಡಿದ್ದರು. ಅದರಂತೆ ಪೂಜಾರಿ ರಾಹುಲ್ ಜೊತೆ ವೇದಿಕೆಯನ್ನು ಹಂಚಿಕೊಂಡರು.
ವೇದಿಕೆಗೆ ಆಗಮಿಸಿದ ರಾಹುಲ್ ಗಾಂಧಿ ಪ್ರಥಮವಾಗಿ ಹೋಗಿ ಪೂಜಾರಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಪೂಜಾರಿ ಪ್ರೀತಿಯಿಂದ ರಾಹುಲ್ ಕೆನ್ನೆಯನ್ನು ಸವರಿ ಪ್ರೀತಿ ವ್ಯಕ್ತಪಡಿಸಿದರು.
ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ ರಾಹುಲ್ ಗಾಂಧಿ ಪ್ರಥಮ ಪುಸ್ತಕವನ್ನು ಜನಾರ್ದನ ಪೂಜಾರಿಗೆ ಹಸ್ತಾಂತರಿಸಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಿಗೆ ಆತ್ಮೀಯ ಗೌರವ ಸಲ್ಲಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳ ಮಾಹಿತಿ ನೀಡುವ ಸಲುವಾಗಿ ಗಣ್ಯರು ವೇದಿಕೆ ತೆರವುಗೊಳೀಸುವ ವೇಳೆ ಮತ್ತೊಮ್ಮೆ ರಾಹುಲ್ ಪೂಜಾರಿ ಬಳಿಗೆ ತೆರಳಿ ಅವರನ್ನು ಕೈಹಿಡಿದು ವೇದಿಕೆಯಿಂದ ಕೆಳಗಿಳಿಯಲು ನೆರವಾದರು.
ಕಳೆದ ತಿಂಗಳು ಮಂಗಳೂರಿಗೆ ಆಗಮಿಸಿದ್ದ ರಾಹುಲ್ ಗಾಂಧಿ ಕುದ್ರೋಳಿ ದೇವಳಕ್ಕೆ ಭೇಟಿ ನೀಡಿದಾಗ ಸಮಯ ಮೀರಿ ಹೋದರು ಕಾದು ಕುಳಿತು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಬರಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಜನಾರ್ದನ ಪೂಜಾರಿ ಅವರಲ್ಲಿ ರಾಹುಲ್ ಗಾಂಧಿ ಆರೋಗ್ಯ ವಿಚಾರಿಸಿದ್ದಲ್ಲದೆ ಪೂಜಾರಿಯವರ ಕೈಹಿಡಿದು ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇವಾಲಯದಿಂದ ರಾಹುಲ್ ಗಾಂಧಿ ಹಿಂದಿರುಗುವಾಗ ರಾಹುಲ್ ಗಾಂಧಿ ಎದುರು ಜನಾರ್ದನ ಪೂಜಾರಿ ಕಣ್ಣೀರು ಹಾಕಿದ್ದರು. ರಾಹುಲ್ ಕೆನ್ನೆ ಸವರಿ ಕಣ್ಣೀರಿಟ್ಟು ಗದ್ಗರಿತರಾದ ಪೂಜಾರಿ ಅವರನ್ನು ರಾಹುಲ್ ಗಾಂಧಿ ಸಂತೈಸಿದ್ದರು. ಜನಾರ್ದನ ಪೂಜಾರಿಯನ್ನು ತಬ್ಬಿಕೊಂಡು ರಾಹುಲ್ ಗಾಂಧಿ ಸಮಾಧಾನ ಪಡಿಸಿದ್ದಲ್ಲದೆ ದೆಹಲಿಗೆ ಬರುವಂತೆ ಕೂಡ ಆಹ್ವಾನ ನೀಡಿದ್ದರು..