ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ: ಕುಂದಾಪುರ ಬೀಜಾಡಿಯ ಯೋಧ ಅನೂಪ್ ಮೃತ್ಯು

Spread the love

ಜಮ್ಮುವಿನಲ್ಲಿ ಸೇನಾ ವಾಹನ ಅಪಘಾತ: ಕುಂದಾಪುರ ಬೀಜಾಡಿಯ ಯೋಧ ಅನೂಪ್ ಮೃತ್ಯು

ಕುಂದಾಪುರ: ಕುಂದಾಪುರ: ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದ ಸೇನಾ ವಾಹನ ಅಪಘಾತದಲ್ಲಿ ಕುಂದಾಪುರ ಬೀಜಾಡಿ ಮೂಲದ ಯೋಧ ಸಾವನ್ನಪ್ಪಿದ್ದಾರೆ.

ಕುಂದಾಪುರ ಬೀಜಾಡಿಯ ನಿವಾಸಿ ಚಂದು ಪೂಜಾರಿ ನಾರಾಯಣ ಪೂಜಾರಿ ದಂಪತಿಗಳ ಪುತ್ರ ಅನೂಪ್ ಪೂಜಾರಿ (31) ಹುತಾತ್ಮ ಯೋಧ

ಮಂಗಳವಾರ ಸಂಜೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ 18 ಯೋಧರು ಪ್ರಯಾಣಿಸುತ್ತಿದ್ದ ಟ್ರಕ್ ಇಕ್ಕಟ್ಟಾದ ರಸ್ತೆಯಿಂದ ಕಣಿವೆಗೆ ಉರುಳಿದ್ದು, ಈ ದುರಂತದಲ್ಲಿ 5 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಶಾಲಾ ದಿನಗಳಲ್ಲೇ ಯೋಧನಾಗುವ ಕನಸು ಹೊತ್ತಿದ್ದ ಅನೂಪ್ ಆ ಕನಸುಗಳನ್ನು ನನಸಾಗಿಸಿ 13 ವರ್ಷಗಳ ಹಿಂದೆಯೇ ಸೇನೆಗೆ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದು, ಕಳೆದ ತಿಂಗಳು ರಜೆಗೆ ಆಗಮಿಸಿ ಡಿ.15 ರಂದು ನಡೆದ ಕೋಟೇಶ್ವರದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದಲ್ಲದೆ ಮಗಳ ಹುಟ್ಟುಹಬ್ಬವನ್ನು ಆಚರಿಸಿ ಬಳಿಕ ಸೇನೆಗೆ ಹಿಂತಿರುಗಿದ್ದರು. ಅನೂಪ್ ಜೊತೆಗಿದ್ದ ಸ್ನೇಹಿತ ಯೋಧ ಆಂಜನೇಯ ಪಾಟೀಲ್ ತನ್ನ ಸಹೋದರ ನೊಂದಿಗೆ ತಡರಾತ್ರಿ ಹೊರಟು ಬಂದು ಬೆಳಿಗ್ಗೆ ಮೃತ ಯೋಧನ ಮನೆಗೆ ಬಂದಿದ್ದಾರೆ.

ಗುರುವಾರ ತೆಕ್ಕಟ್ಟೆಯಿಂದ ಪಾರ್ಥೀವ ಶರೀರವನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಮಾಜ ಸೇವಕ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಗ್ರಾಮಸ್ಥರ ನೇತೃತ್ವದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ದತೆ ಮಾಡಲಾಗುತ್ತಿದೆ.

ಮೃತ ಅನೂಪ್ ಪತ್ನಿ, 2 ವರ್ಷದ ಪುತ್ರಿ, ತಾಯಿ, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಶಾಸಕ ಎ.ಕಿರಣ್‌ಕುಮಾರ ಕೊಡ್ಗಿ, ಉಪ ವಿಭಾಗಾಧಿಕಾರಿ ಮಹೇಶ್ಚಂದ್ರ, ತಹಶೀಲ್ದಾರ್ ಹೆಚ್.ಎಸ್.ಶೋಭಾಲಕ್ಷ್ಮೀ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಜನರು, ತಂಡೋಪತಂಡವಾಗಿ ಅನೂಪ್ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಜಿಲ್ಲೆಗೆ ಆಗಮಿಸುವ ವೀರ ಯೋಧನ ಮೃತದೇಹವನ್ನು ಬರಮಾಡಿಕೊಂಡು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ, ಕುಟುಂಬ ಸದಸ್ಯರೊಂದಿಗೆ ಸಮನ್ವಯ ನಡೆಸುತ್ತಿದೆ. ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಒಳಪೇಟೆಗೆ ಬಂದು ಅಲ್ಲಿಂದ ಬೀಜಾಡಿ ಫಿಶರೀಸ್ ರಸ್ತೆಯ ಮೂಲಕ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಅನೂಪ್ ಕಲಿತ ಶಾಲೆಯಾದ ಬೀಜಾಡಿ ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ವ್ಯವಸ್ಥೆಗೆ ಕಲ್ಪಿಸಲಾಗಿದೆ. ಬಾಲ್ಯದ ಜೀವನದಲ್ಲಿ ಆಟವಾಡಿ ಬೆಳೆದ ಬೀಜಾಡಿ ಕಡಲ ತೀರದಲ್ಲಿನ ಸರ್ಕಾರಿ ಸ್ಥಳದಲ್ಲಿ ಯೋಧನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.


Spread the love
Subscribe
Notify of

0 Comments
Inline Feedbacks
View all comments