ಜಲ ಸಂರಕ್ಷಣೆ ನಿರಂತರವಾಗಿರಲಿ-ಜಿ. ಪಂ. ಸಿಇಒ ಸಿಂಧೂ ರೂಪೇಶ್
ಉಡುಪಿ: ಜಲ ಸಂರಕ್ಷಣೆಯ ಕಾರ್ಯ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಿರದೆ , ವರ್ಷ ಪೂರ್ತಿ ಪ್ರತೀ ದಿನ ನಿರಂತರವಾಗಿ ನಡೆಯಬೇಕು ಹಾಗೂ ಪ್ರತಿ ಮನೆ ಮನೆಗಳಲ್ಲೂ ನೀರನ್ನು ವ್ಯರ್ಥವಾಗಿ ಪೋಲು ಮಾಡದೇ ನಿಯಮಿತವಾಗಿ ಬಳಸುವುದರ ಮೂಲ ನೀರಿನ ಸಂರಕ್ಷಣೆ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಹೇಳಿದ್ದಾರೆ.
ಅವರು ಶುಕ್ರವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ಸುಮಾರು 15 ನದಿಗಳಿದ್ದರೂ ಸಹ ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸಲು ಪ್ರತಿವರ್ಷ ಕೋಟ್ಯಾಂತರ ಹಣ ವ್ಯಯಿಸುವುದು ವಿಷಾದನೀಯ, ್ಲ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತಿದ್ದು, ಪ್ರತಿ ವರ್ಷ ನೆರೆ ಎದುರಿಸುವ ಪರಿಸ್ಥಿತಿ ಇದೆ ಆದರೂ ಸಹ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಟ್ಯಾಂಕರ್ ನೀರು ಅವಲಂಬಿಸುವಂತಾಗಿದೆ, ಮಳೆ ನೀರನ್ನು ಸರಿಯಾದ ಪ್ರಮಾಣದಲ್ಲಿ ಇಂಗಿಸಿ, ಮಳೆ ನೀರು ಕೊಯ್ಲು ವಿಧಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುುವುದರ ಜೊತೆಗೆ ಜಲ ಸಂರಕ್ಷಣೆ ಸಾಧ್ಯವಾಗಲಿದೆ ಎಂದು ಸಿಂಧೂ ಬಿ ರೂಪೇಶ್ ಹೇಳಿದರು.
ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಕೈಗೊಳ್ಳುವ ಉದ್ದೇಶದಿಂದ ಜಿಲ್ಲೆಯ ಶಾಲೆಗಳು, ಹಾಸ್ಟೆಲ್ಗಳು ಮತ್ತು ಸರಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸುವಂತೆ ಸಂಬಂದಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ ಸಿಇಓ ಅವರು, ಪ್ರತಿ ವರ್ಷ ಜಲ ಸಂರಕ್ಷಣೆಗಾಗಿ ಎಲ್ಲಾ ಇಲಾಖೆಗಳು ತಮ್ಮ ಅನುದಾನದಲ್ಲಿ ಸ್ವಲ್ಪ ಪ್ರಮಾಣವನ್ನು ಮೀಸಲಿಡುವಂತೆ ತಿಳಿಸಿದರು.
ಉಡುಪಿಯಲ್ಲಿ ಕಳೆದ 20-30 ವರ್ಷದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಇಲ್ಲದಿದ್ದು, ಇತ್ತೀಚಿನ ವರ್ಷಗಳಲ್ಲಿ ಕಂಡು ಬರುತ್ತಿರುವ ಬಗ್ಗೆ ಯೋಚಿಸಬೇಕಿದೆ, ನೀರಿನ ಅಸಮರ್ಪಕ ಬಳಕೆ, ಅಪವ್ಯಯ ತಪ್ಪಿಸುವುದು ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ, ಅಂರ್ತಜಲ ವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು, ವಿಶ್ವದ ಒಟ್ಟು ನೀರಿನ ಪ್ರಮಾಣದಲ್ಲಿ ಶೇ.0.5 ಮಾತ್ರ ಬಳಕಗೆ ಯೋಗ್ಯವಾಗಿದ್ದು, ಇದೇ ಸಕಲ ಜೀವರಾಶಿಗೆ ಆಧಾರವಾಗಿದ್ದು, ಮುಂದಿನ ಪೀಳಿಗೆಗೆ ಇದನ್ನು ಉಳಿಸಬೇಕು ಎಂದು ಸಿಇಓ ಹೇಳಿದರು.
ಜಲ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿಯನ್ನು ಸಿಇಓ ಭೋಧಿಸಿದರು.
ಇದಕ್ಕೂ ಮುಂಚೆ ಜಿಲ್ಲಾ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಗಿಡ ನೆಟ್ಟು ನೀರುಣಿಸುವ ಮೂಲಕ ಸಿಂಧೂ ಬಿ ರೂಪೇಶ್ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸರಾವ್, ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಸಾಮಾಜಿಕ ಅರಣ್ಯ ಇಲಾಖೆಯ ಡಿಎಫ್ಓ ಭಾಸ್ಕರ್, ಆರ್.ಎಫ್.ಓ ರವೀಂದ್ರ ಆಚಾರ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.