ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳ ಬಂಧನ

Spread the love

ಜಲೀಲ್ ಕರೋಪಾಡಿ ಹತ್ಯೆ ಆರೋಪಿಗಳ ಬಂಧನ

ಮಂಗಳೂರು: ಕರೋಪಾಡಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣವನ್ನು ಭೇಧಿಸಿರುವ ವಿಶೇಷ ಪೋಲಿಸರ ತಂಡ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂದಿತರನ್ನು ಕರೋಪಾಡಿ ಗ್ರಾಮದ ರಾಜೇಶ್ ನಾಯಕ್, ಮಾಣಿಯ ನರಸಿಂಹ, ಪುತ್ತೂರು ತಾಲೂಕಿನ ಪ್ರಜ್ವಲ್, ಪುಷ್ಪರಾಜ್ ಗೌಡ, ರೋಷನ್, ಪುನಿತ್ ಮತ್ತು ಸಚಿನ್ ಎಂದು ಗುರುತಿಸಲಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅವರು ಎಪ್ರಿಲ್ 20 ರಂದು ಬೆಳಿಗ್ಗೆ 11-35 ಗಂಟೆ ಸಮಯಕ್ಕೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎ.ಅಬ್ದುಲ್ ಜಲೀಲ್ ಎಂಬವರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕುಳಿತುಕೊಂಡಿರುವಾಗ ಯಾರೋ 4 ಜನ ದುಷ್ಕರ್ಮಿಗಳು ಮೋಟಾರ್ ಸೈಕಲ್‌ನಲ್ಲಿ ಬಂದು ಅವರ ಕಛೇರಿಯಲ್ಲೇ ತಲವಾರು ಇತ್ಯಾದಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಮೋಟಾರ್ ಸೈಕಲ್‌ಗಳಲ್ಲಿ ಪರಾರಿಯಾಗಿದ್ದು, ಈ ಬಗ್ಗೆ ಅಬ್ದುಲ್ ಜಲೀಲ್ ರವರ ತಮ್ಮ ಅನ್ವರ್ ಎಂಬವರು ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮ ಪಂಚಾಯತ್ ಕಛೇರಿಯಲ್ಲಿ ಹಾಡುಹಗಲೇ ನಡೆದ ಘಟನೆಯನ್ನು ಗಂಭಿರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆ ಮಾಡುವರೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರವರ ನೇತೃತ್ವದಲ್ಲಿ 5 ತಂಡವನ್ನು ರಚಿಸಿದ್ದು, ಸದ್ರಿ ಪ್ರಕರಣದಲ್ಲಿ ಒಳಗೊಂಡ ಒಟ್ಟು 11 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ 2 ಮೋಟಾರ್ ಸೈಕಲ್, 2 ತಲವಾರು ಹಾಗೂ 1 ಒಮ್ನಿ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ದಸ್ತಗಿರಿ ಮಾಡಿದ ಆರೋಪಿಗಳ ಪೈಕಿ ಪ್ರಕರಣದ ಮುಖ್ಯ ರೂವಾರಿಗಳಾದ ಕರೋಪಾಡಿ ಮಿತ್ತನಡ್ಕದ ಬೇತ ಮನೆ ನಿವಾಸಿ ಪ್ರಸ್ತುತ ಕನ್ಯಾನದಲ್ಲಿ ಶಾಮೀಯಾನ ಅಂಗಡಿಯನ್ನು ನಡೆಸಿಕೊಂಡಿರುವ ರಾಜೇಶ್ ನಾಯಕ್ ಹಾಗೂ ಮಾಣಿಯ ಲಕ್ಕಪ್ಪಕೋಡಿ ನಾರಾಯಣ ಶೆಟ್ಟಿಯವರ ಮಗ ನರಸಿಂಹ ಯಾನೆ ನರಸಿಂಹ ಶೆಟ್ಟಿಯನ್ನು ಈ ದಿನ ಉಡುಪಿಯಲ್ಲಿ ವಶಕ್ಕೆ ಪಡೆದು ವಿಚಾರಿಸಿದಾಗ ಇವರುಗಳು ಭೂಗತ ಪಾತಕಿ ವಿಕ್ಕಿ ಶೆಟ್ಟಿ @ ವಿಕ್ರಮ್ ಶೆಟ್ಟಿ @ ಬಾಲಕೃಷ್ಣ ಶೆಟ್ಟಿಯವರ ಪಿತೂರಿಯಂತೆ ಪುತ್ತೂರು ತಾಲೂಕು ಬರೆಪ್ಪಾಡಿಯ ರೋಶನ್, ಸವಣೂರಿನ ಪುನೀತ್, ಬೆಳಂದೂರಿನ ಪ್ರಜ್ವಲ್, ಸವಣೂರಿನ ಸಚಿನ್ ಮತ್ತು ಪುಷ್ಪರಾಜ್, ಕನ್ಯಾನದ ಸತೀಶ್ ರೈ, ವೀರಕಂಭದ ಕೇಶವ, ಸುರತ್ಕಲ್ ಕೃಷ್ಣಾಪುರದ ಪ್ರಶಾಂತ್ ಮತ್ತು ಕನ್ಯಾನದ ವಚನ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ರಾಜೇಶ್ ನಾಯಕ್ ವಿರುದ್ಧ ಅ.ಕ್ರ. : 166/2015 ಕಲಂ:143,147,448,323,354,504,506 ಜೊತೆಗೆ 149 ಭಾ.ದಂ.ಸಂ.ರಂತೆ ಪ್ರಕರಣ ದಾಖಲಾಗಿರುತ್ತದೆ. ಸದ್ರಿ ಪ್ರಕರಣವನ್ನು ಜಲೀಲ್ ಕರೋಪಾಡಿಯವರೇ ತನ್ನ ವಿರುದ್ಧ ದಾಖಲು ಮಾಡಿಸಿರುತ್ತಾರೆ ಎಂಬುದಾಗಿ ರಾಜೇಶ್ ನಾಯಕ್ ದ್ವೇಷ ಹೊಂದಿರುತ್ತಾನೆ.
ದಿನಾಂಕ 17-12-2016 ರಂದು ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಮಿತ್ತನಡ್ಕ ಎಂಬಲ್ಲಿ ಪಿರ್ಯಾದುದಾರ ರಾಜೇಶ್ ನಾಯಕ್ ಹಾಗೂ ಇತರರು ತೋರಣ ಕಟ್ಟುವುದು ಇತ್ಯಾದಿ ಕೆಲಸ ಮಾಡಿಕೊಂಡಿದ್ದ ಸ್ಥಳದಲ್ಲಿ ಆರೋಪಿಗಳಾದ 1) ನವಾಫ್, 2).ಸಜಾಬ್, 3). ಖಲೀಲ್ ರವರು ಬೈಕ್ ಸವಾರಿ ಮಾಡಿಕೊಂಡು ಧೂಳು ಎಬ್ಬಿಸಿರುವುದನ್ನು ರಾಜೇಶ್ ನಾಯಕ್ ಆಕ್ಷೇಪಿಸಿದ್ದಕ್ಕೆ ನವಾಫ್, .ಸಜಾಬ್, ಖಲೀಲ್ ಸುಲೈಮಾನ್, ಖಲಂದರ್ ಅಲ್ಲದೆ ಇತರ 2-3 ಜನರನ್ನು ಸೇರಿಕೊಂಡು ಬಂದು ಕಬ್ಬಿಣದ ರಾಡ್, ಮರದ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುತ್ತಾರೆ. ಈ ಪ್ರಕರಣದಲ್ಲಿ ರಾಜೇಶ್ ನಾಯಕ್‌ನ ಮಿತ್ರರೂ ಹಾಗೂ ಗಾಯಾಳುವಾದ ರಮೇಶ ಎಂಬವರಿಗೆ ಜಾತಿ ನಿಂದನೆ ಮಾಡಿದ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. : 333/2016 ಕಲಂ: 143,147,148,341,323,324,506,307 ಜೊತೆಗೆ 149 ಐಪಿಸಿ ಮತ್ತು Sc/St (Prevention of Atrocities) Act ರಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕೃತ್ಯದಿಂದ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆದ ಪರಿಣಾಮ ರಾಜೇಶ್ ನಾಯಕ್ ಅವಮಾನಕ್ಕೊಳಗಾಗಿದ್ದು, ಈ ಕೃತ್ಯದ ಆರೋಪಿಗಳಿಗೆ ಜಲೀಲ್ ಬೆಂಬಲವಾಗಿದ್ದಾನೆಂದು ತಿಳಿದಿರುತ್ತಾನೆ.ಇದೇ ಕೃತ್ಯಕ್ಕೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೊ.ನಂ 334/2016 ಕಲಂ: 143,147,148,341,504,506,323,324 ಜೊತೆಗೆ 149 ಐಪಿಸಿ ಯಂತೆ ರಾಜೇಶ್ ನಾಯಕ್ ಹಾಗೂ ಆತನ ಜೊತೆಯಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಜಲೀಲ್ ಕರೋಪಾಡಿಯವರೇ ತನ್ನ ವಿರುದ್ಧ ಕೇಸು ಮಾಡಿಸಿರುತ್ತಾರೆಂದು ರಾಜೇಶ್ ನಾಯಕ್ ದ್ವೇಷ ಹೊಂದಿರುತ್ತಾನೆ.
2015 ರಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕಾಗಿ ದಿನೇಶ್ ಶೆಟ್ಟಿಯು ಆಕಾಂಕ್ಷಿಯಾಗಿದ್ದು, ಸದ್ರಿ ದಿನೇಶ್ ಶೆಟ್ಟಿಯು ಭೂಗತ ಪಾತಕಿ ವಿಕ್ಕಿಶೆಟ್ಟಿ @ ಬಾಲಕೃಷ್ಣ ಶೆಟ್ಟಿಯ ಚಿಕ್ಕಪ್ಪನ ಮಗನಾಗಿದ್ದು, ವಿಕ್ಕಿ ಶೆಟ್ಟಿಯು ದಿನೇಶ್ ಶೆಟ್ಟಿಯನ್ನು ಬೆಂಬಲಿಸಿದ್ದು, ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ದಿನೇಶ್ ಶೆಟ್ಟಿಗೆ ಅವಕಾಶ ಸಿಗದೆ ಜಲೀಲ್ ಕರೋಪಾಡಿಗೆ ಉಪಾಧ್ಯಕ್ಷ ಸ್ಥಾನ ಸಿಕ್ಕಿದ್ದು, ಇದರಿಂದ ವಿಕ್ಕಿ ಶೆಟ್ಟಿ ಆರೋಪಿಗಳ ಜೊತೆ ಬೇಸರ ವ್ಯಕ್ತಪಡಿಸಿರುತ್ತಾನೆ.
ಕರೋಪಾಡಿ ಗ್ರಾಮಪಂಚಾಯತ್‌ನ ಯಾವುದೇ ಮುಖ್ಯ ವಿಚಾರಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗಲೂ ದಿನೇಶ್ ಮತ್ತು ಜಲೀಲ್‌ನ ಮಧ್ಯೆ ಗಲಾಟೆಗಳು ಆಗುತ್ತಿದ್ದು, ಪಂಚಾಯತ್ ನಲ್ಲಿ ಯಾವುದೇ ತೀರ್ಮಾನಗಳಿದ್ದರೂ ವಿಕ್ಕಿ ಶೆಟ್ಟಿ ದೂರವಾಣಿ ಮುಖಾಂತರ ದಿನೇಶ್ ಶೆಟ್ಟಿಗೆ ಹೇಳಿ ತನ್ನ ಯಾವುದೇ ವಿಚಾರಗಳಿಗೂ ಜಲೀಲ್ ಬೆಲೆ ನೀಡುತ್ತಿಲ್ಲ ಎಂದು ವಿಕ್ಕಿ ಶೆಟ್ಟಿ ದ್ವೇಷ ವ್ಯಕ್ತಪಡಿಸಿರುವುದಾಗಿದೆ.
ಆರೋಪಿಗಳಾದ, ಸತೀಶ್ ರೈ, ಕೇಶವ, ಪ್ರಶಾಂತ್ ರವರು ರಾಜೇಶ ನಾಯಕ್ ರೂಪಿಸಿದ ಸಂಚಿಗೆ ಸಹಾಯ ನೀಡಿರುತ್ತಾರೆ. ಉಳಿದಂತೆ ಪ್ರಕರಣದಲ್ಲಿ ಶಾಮೀಲಾಗಿರುವ ಇತರರನ್ನು ಬಂಧಿಸಬೇಕಾಗಿರುತ್ತದೆ.
ಪ್ರಕರಣದ ಪ್ರಮುಖ ಆರೋಪಿತ ರಾಜೇಶ್ ನಾಯಕ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ದಾಖಲಾಗಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿರುತ್ತಾನೆ. ಆರೋಪಿ ನರಸಿಂಹ ಶೆಟ್ಟಿಯ ಮೇಲೆ 2 ಪ್ರಕರಣಗಳು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ. ಆರೋಪಿ ಸತೀಶ್ ರೈ ಮೇಲೆ 4 ಪ್ರಕರಣಗಳು ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ರೌಡಿ ಶೀಟರ್ ಆಗಿರುತ್ತಾನೆ.
ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತಂಡವನ್ನು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರು, ಪಶ್ಚಿಮ ವಲಯ, ಮಂಗಳೂರು ರವರು ಶ್ಲಾಘಿಸಿರುತ್ತಾರೆ.


Spread the love