ಜಿಲ್ಲಾಧಿಕಾರಿ ಸೆಂಥಿಲ್ ರಾಜೀನಾಮೆಯ ಹಿಂದೆ ಷಡ್ಯಂತ್ರ ಅಡಗಿದೆ – ಐವಾನ್ ಡಿಸೋಜಾ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆಯ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ ಎನ್ನವುದು ಅವರು ರಾಜೀನಾಮೆ ಪತ್ರದಿಂದಲೇ ಸಾಬೀತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಹೇಳಿದರು.
ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ರಾಜೀನಾಮೆಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.
ನಮ್ಮ ಸರಕಾರದ ಅವಧಿಯಲ್ಲಿ ಈ ಜಿಲ್ಲೆಗೆ ಆಗಮಿಸಿದ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದ ಒರ್ವ ದಕ್ಷ ಅಧಿಕಾರಿಯಾಗಿದ್ದರು. ಅವರ ಕರ್ತವ್ಯದಲ್ಲಿ ಯಾವುದೇ ರೀತಿಯ ಚ್ಯುತಿ ಬಾರದಂತೆ ಕೆಲಸ ಮಾಡಿದ ಜಿಲ್ಲೆಯಲ್ಲಿ ಮಾದರಿಯಾಗಿದ್ದರು. ಈ ಹಿಂದೆ ನಗರ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದ ಸಂದೀಪ್ ಪಾಟೀಲ್ ಅವರು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾಗಲೇ ಬಿಜೆಪಿ ಸರಕಾರ ಅವರನ್ನು ವರ್ಗಾವಣೆಗೊಳಿಸಿತು. ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸೇವೆ ಸಲ್ಲಿಸಲು ಬಿಜೆಪಿ ಸರಕಾರ ಅಡ್ಡಗಾಲು ಹಾಕುತ್ತಿದೆ.
ರಾಜ್ಯದಲ್ಲಿ ಏಕಚಕ್ರಾಧಿಪತ್ಯ ನಡೆಯುತ್ತಿದ್ದು, ಜನರ ಸಮಸ್ಯೆಗಳನ್ನು ಕಡೆಗಣಿಸಿಕೊಂಡು ತಮ್ಮ ವೈಫಲ್ಯ ಮುಚ್ಚಿ ಹಾಕಲು ಜನರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತದೆ. ನೆರೆ ಪರಿಹಾರ ಕಾರ್ಯದಲ್ಲಿ ಸರಕಾರವು ಸಂಪೂರ್ಣ ವಿಫಲವಾಗಿದೆ. ಇವರ ಅಧಿಕಾರದ ದರ್ಪಕ್ಕೆ ಹೆದರಿ ಪ್ರಾಮಾಣಿಕ, ನಿಷ್ಕಳಂಕ ಹಾಗೂ ದಕ್ಷ ಅಧಿಕಾರಿಗಳು ಹುದ್ದೆ ತ್ಯಜಿಸಿ ಹೋಗುವ ಸಂಭವ ಏರ್ಪಟ್ಟಿದೆ ಎಂದರು.