ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪಾಸಿಟಿವ್ ಪ್ರಕರಣಗಳು ; ಕುಂದಾಪುರದ ಸರ್ಕಾರಿ ಹೆರಿಗೆ ಆಸ್ಪತ್ರೆ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತನೆ
ಕುಂದಾಪುರ: ಕೆಲ ತಿಂಗಳ ಹಿಂದಷ್ಟೇ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನಿಂದ ಕೊಡುಗೆಯಾಗಿ ನೀಡಿರುವ ಶ್ರೀ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ಹೆರಿಗೆ ವಾರ್ಡ್ ಅನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ.
ಹೊರರಾಜ್ಯಗಳಿಂದ ಬಂದವರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಇವರಿಗೆಲ್ಲಾ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಎಲ್ಲಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದೆ. ಸದ್ಯ ಅಸ್ಪತ್ರೆಯ ಲಕ್ಷ್ಮೀ ಸೋಮ ಬಂಗೇರ ಸ್ಮಾರಕ ವಾರ್ಡ್ನಲ್ಲಿ ಹೆರಿಗಾಗಿ ಸೇರ್ಪಡೆಗೊಂಡು ಆರೈಕೆ ಪಡೆದುಕೊಳ್ಳುತ್ತಿರುವವರನ್ನು, ಈ ಹಿಂದೆ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ನಿಂದ ಕೊಡುಗೆಯಾಗಿ ನೀಡಿದ್ದ ಹಳೆಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಬೈಂದೂರು ಹಾಗೂ ಕುಂದಾಪುರ ಭಾಗದ ಜನರಿಗೆ ಪಾಸಿಟಿವ್ ಬಂದಾಗ ಆ ವೇಳೆಯಲ್ಲಿ ಈ ಆಸ್ಪತ್ರೆಯನ್ನು ಬಳಸಿಕೊಳ್ಳಲಿದ್ದು, ಯಾರಿಗೆ ರೋಗದ ಲಕ್ಷಣಗಳಿರುವುದಿಲ್ಲವೊ ಅಂತವರಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದಂತೆ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೇಕಾಗುತ್ತದೆಯೋ ಅಂತವರನ್ನು ಉಡುಪಿಯಲ್ಲಿನ ಟಿಎಂಎ ಪೈ ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಆಕ್ಸಿಜನ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಯಾರಿಗೆ ಬೇಡವೋ ಅಂತವರನ್ನು 120 ಹಾಸಿಗೆಯುಳ್ಳ ಕುಂದಾಪುರದ ಕೋವಿಡ್-19 ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸಲಾಗುತ್ತದೆ.
ಇಂದಿನಿಂದಲೇ ಸೇವೆಗೆ ಸಜ್ಜು: ಡಿಸಿ
ಗುರುವಾರ ಸಂಜೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಜಿ. ಜಗದೀಶ್, 120 ಹಾಸಿಗೆಗಳುಳ್ಳ ಕೋವಿಡ್-19 ಆಸ್ಪತ್ರೆ ಇಂದಿನಿಂದಲೇ ಸೇವೆಗೆ ಸಜ್ಜುಗೊಂಡಿದೆ. ವೈದ್ಯರು ದಾದಿಯರು ಕೊರೊನಾ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಲಿದ್ದು, ಹೆಚ್ಚುವರಿ ಸಿಬ್ಬಂದಿಗಳು ಬೇಕಾದಲ್ಲಿ ತಿಳಿಸುವಂತೆ ಈಗಾಗಲೇ ಆಸ್ಪತ್ರೆಯ ವೈದ್ಯಾಧಿಕಾರಿಯವರಿಗೆ ಸೂಚನೆ ಕೊಟ್ಟಿದ್ದೇನೆ. ಖಾಸಗಿ ವೈದ್ಯರನ್ನೂ ಬಳಸಿಕೊಳ್ಳಲು ಈಗಾಗಲೇ ಮಾತುಕತೆ ನಡೆಸಿದ್ದೇವೆ. ಕಾರ್ಕಳದಲ್ಲಿಯೂ 100 ಹಾಸಿಗೆಗಳುಳ್ಳ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿದ್ದೇವೆ ಎಂದರು.
ನುರಿತ ವೈದ್ಯರ ತಂಡ ನೇಮಕ:
ನಮ್ಮ ಜಿಲ್ಲೆಯಲ್ಲಿ ಶೇಕಡಾ 95 ರಷ್ಟು ಜನರಿಗೆ ರೋಗದ ಲಕ್ಷಣಗಳಿಲ್ಲದೇ ಪಾಸಿಟಿವ್ ಬಂದಿದೆ. ಹೀಗಾಗಿ ಅವರಿಗೆ ಚಿಕಿತ್ಸೆ ನೀಡಲು ಈ ವ್ಯವಸ್ಥೆಯನ್ನು ಬಳಸಿಕೊಂಡಿದ್ದೇವೆ. ನಮ್ಮ ಜಿಲ್ಲಾಡಳಿತದ ಮುಖ್ಯ ಉದ್ದೇಶ ಪ್ರತಿಯೊಬ್ಬರನ್ನು ರಕ್ಷಿಸುವುದು. ಜನರ ಜೀವ ಉಳಿಸುವುದು ನಮ್ಮ ಕರ್ತವ್ಯ. ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಕೋವಿಡ್ ವಿರುದ್ದ ಹೋರಾಡಲು ಸಜ್ಜಾಗಿದ್ದೇವೆ. ಒಂದೊಂದು ಪ್ರಕರಣವೂ ಚಾಲೆಂಜ್ ಆಗಿ ಸ್ವೀಕರಿಸಿದ್ದೇವೆ. ಜಿಲ್ಲೆಯಲ್ಲಿ ಅತ್ಯುತ್ತಮವಾದ ನುರಿತ ವೈದ್ಯರ ತಂಡವನ್ನು ನೇಮಕ ಮಾಡಿದ್ದೇವೆ ಎಂದರು.
ಜಿಲ್ಲಾಧಿಕಾರಿಯವರಿಂದ ಶ್ಲಾಘನೆ:
ಹೆರಿಗೆ ಆಸ್ಪತ್ರೆಯಲ್ಲಿದ್ದ ಗರ್ಭಿಣಿ ಹಾಗೂ ಬಾಣಂತಿಯರನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಕೋವಿಡ್ ಆಸ್ಪತ್ರೆಗೆ ಪೂರಕ ವಾತಾವರಣವನ್ನು ಕಲ್ಪಿಸಿದ್ದಾರೆ. ಬೆಳಿಗ್ಗೆಯಿಂದ ಸಂಜೆಯೊಳಗೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಈ ತಂಡ ಜಿಲ್ಲಾಧಿಕಾರಿವರ ಪ್ರಶಂಸೆಗೆ ಪಾತ್ರವಾಗಿದೆ.