ಜು.6ರಿಂದ ಉಡುಪಿ ಜಿಲ್ಲೆಯ ಚರ್ಚುಗಳಲ್ಲಿ ಸಾಮೂಹಿಕ ಪೂಜೆಗೆ ಅವಕಾಶ; ಅ. 2 ರ ವರೆಗೆ ಭಾನುವಾರ ಪೂಜೆಗಳು ರದ್ದು
ಉಡುಪಿ: ಜುಲೈ 2 ರಿಂದ ಆಗಸ್ಟ್ 2 ರವರೆಗಿನ ಪ್ರತಿ ಭಾನುವಾರಗಳಲ್ಲಿ ಲಾಕ್ ಡೌನ್ ಇರುವುದರಿಂದ ಉಡುಪಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಲಾಕ್ಡೌನ್ ಇರುವುದರಿಂದ ಭಾನುವಾರದ (ಶನಿವಾರ ಸಂಜೆಯನ್ನು ಸೇರಿಸಿ) ಪೂಜೆ, ಆರಾಧನೆಗಳನ್ನು ರದ್ದುಗೊಳಿಸಿದ್ದು ಜುಲೈ 6 ಸೋಮವಾರದಿಂದ ಸಾಮೂಹಿಕ ಪೂಜೆ, ಆರಾಧನೆಗಳಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಉಡುಪಿ ಯುನಾಯ್ಟೆಡ್ ಕ್ರಿಶ್ಚನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಉಡುಪಿ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷರು ಮತ್ತು ಯುನಾಯ್ಟೆಡ್ ಕ್ರಿಶ್ಚನ್ ಫೋರಂ ಅಧ್ಯಕ್ಷರೂ ಆಗಿರುವ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಕೋವಿದ್-19 ಸೋಂಕಿನ ಕಾರಣದಿಂದ ಯಾವುದೇ ಸಾಮೂಹಿಕ ಧಾರ್ಮಿಕ ಚಟುವಟಿಕೆಯಿಲ್ಲದೆ ಮುಚ್ಚಲ್ಪಟ್ಟಿದ್ದ ಚರ್ಚ್ಗಳನ್ನು ಜೂನ್ 8 ರಿಂದ ತೆರೆಯುವ ಅವಕಾಶವನ್ನು ಕರ್ನಾಟಕ ಸರಕಾರವು ನೀಡಿದ್ದರೂ ಭಕ್ತಾದಿಗಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ, ಉಡುಪಿ ಜಿಲ್ಲೆಯ ಯಾವುದೇ ಚರ್ಚ್ನಲ್ಲಿ ಜೂನ್ 30 ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳನ್ನು ನಡೆಸದಿರಲು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಉಡುಪಿ ಯುನಾಯ್ಟೆಡ್ ಕ್ರಿಶ್ಚನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ನಿರ್ಧರಿಸಿತ್ತು.
ಜೂನ್ 30 ರಂದು ಉಡುಪಿ ಕಥೋಲಿಕ ಧರ್ಮಾಧ್ಯಕ್ಷರ ನಿವಾಸದಲ್ಲಿ ಉಡುಪಿ ಯುನಾಯ್ಟೆಡ್ ಕ್ರಿಶ್ಚನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ನ ನಾಯಕರು ಸಭೆಸೇರಿ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು. ಕೋವಿದ್-19 ಸೋಂಕಿನ ಪರಿಸ್ಥಿತಿ ದಿನೇದಿನೇ ಗಂಭೀರ ಸ್ವರೂಪವನ್ನು ಪಡೆಯುತ್ತಿದೆ. ಅಂತೆಯೇ, ಭಕ್ತಾದಿಗಳು ಸಾಧಾರಣ 100 ದಿನಗಳಿಂದ ಸಾಮೂಹಿಕ ಪೂಜೆ, ಪ್ರಾರ್ಥನೆಗಳಿಲ್ಲದೆ ಇದ್ದು, ಚರ್ಚ್ಗಳಲ್ಲಿ ಪೂಜೆ, ಪ್ರಾರ್ಥನೆಗಳಲ್ಲಿ ಭಾಗವಹಿಸಲು ಉತ್ಕಟ ಇಚ್ಛೆಯನ್ನು ಹೊಂದಿದ್ದಾರೆ. ಇಂಥಹ ಪರಿಸ್ಥಿತಿಯಲ್ಲಿ ಸಕಲ ಮುಂಜಾಗರೂಕತೆಗಳೊಂದಿಗೆ ಕೋವಿದ್-19 ವೈರಸ್ನೊಂದಿಗೆ ದಿನನಿತ್ಯದ ಜೀವನ ನಡೆಸುವುದೊಂದೇ ಉಳಿದ ದಾರಿ. ಇದನ್ನು ಅರಿತು ಸರಕಾರವು ಬಹುತೇಕ ಚಟುವಟಿಕೆಗಳಿಗೆ ಅನುಮತಿಯನ್ನು ನೀಡಿದೆಯಾದರೂ, ಜುಲೈ 5 ಭಾನುವಾರದಿಂದ ಮುಂದಿನ ನಾಲ್ಕು ಭಾನುವಾರಗಳಲ್ಲಿ ರಾಜ್ಯದಾದ್ಯಂತ ಲಾಕ್ಡೌನನ್ನು ಘೋಷಿಸಿದೆ.
ಈ ಮೇಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಉಡುಪಿ ಜಿಲ್ಲೆಯ ಎಲ್ಲಾ ಚರ್ಚ್ಗಳಲ್ಲಿ ಜುಲೈ 6 ಸೋಮವಾರದಿಂದ ಸಾಮೂಹಿಕ ಪೂಜೆ, ಆರಾಧನೆಗಳಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಆಗಸ್ಟ್ 2 ರವರೆಗಿನ ಭಾನುವಾರಗಳಲ್ಲಿ ಲಾಕ್ಡೌನ್ ಇರುವುದರಿಂದ ಭಾನುವಾರದ (ಶನಿವಾರ ಸಂಜೆಯನ್ನು ಸೇರಿಸಿ) ಪೂಜೆ, ಆರಾಧನೆಗಳನ್ನು ನಡೆಸುವುದು ಸಾಧ್ಯವಿಲ್ಲ. ವಾರದ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಾಗೂ ಜಿಲ್ಲಾ ಆಡಳಿತವು ನೀಡಿದ ಎಲ್ಲಾ ಮಾರ್ಗದರ್ಶಿ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಭಕ್ತಾದಿಗಳಿಗಾಗಿ ಪೂಜೆ, ಆರಾಧನೆಗಳನ್ನು ನಡೆಸಬಹುದು. ಇದಲ್ಲದೆ, ವಿವಿಧ ಕಾಲಕ್ಕೆ ಸರಕಾರ ಹಾಗೂ ಜಿಲ್ಲಾಡಳಿತ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ವಿವಿಧ ಕ್ರೈಸ್ತಸಭೆಗಳೂ ಈ ಸಂಬಂಧಿತ ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಪ್ರತಿ ಚರ್ಚ್ ಮುಖ್ಯಸ್ಥರಿಗೆ ಕಳುಹಿಸಿ ಕೊಟ್ಟಿವೆ. ಚರ್ಚ್ನ ಪ್ರಧಾನ ಗುರುಗಳು/ ಸಭಾ ಪಾಲಕರು ಈ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಜವಾಬ್ದಾರರಾಗಿರುತ್ತಾರೆ. ಕಂಟೈನ್ಮೆಂಟ್ ವಲಯದಲ್ಲಿ ಬರುವ ಚರ್ಚ್ಗಳು ಪರಿಸ್ಥಿತಿ ತಿಳಿಯಾಗುವವರೆಗೆ ಕಾದು, ಅನಂತರ ಚರ್ಚಿನ ಭಕ್ತಾದಿಗಳೊಂದಿಗೆ ಚರ್ಚಿಸಿ ಜಾಗರೂಕತೆಯಿಂದ ಮುಂದಿನ ನಡೆಯನ್ನು ನಿರ್ಧರಿಸತಕ್ಕದ್ದು.
ಉಡುಪಿ ಕಥೋಲಿಕ ಧರ್ಮಪ್ರಾಂತ, ಚರ್ಚ್ ಆಫ್ ಸೌತ್ ಇಂಡಿಯ (ಸಿಎಸ್ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್ (ಯುಬಿಎಂ), ಫುಲ್ ಗೊಸ್ಪೆಲ್ ಪಾಸ್ಟರ್ಸ್ ಅಸೋಸಿಯೇಶನ್ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ನಾಯಕರು ಹಾಜರಿದ್ದರು. ಕೋವಿದ್-19 ಸೋಂಕು ಇನ್ನೊಬ್ಬರಿಗೆ ತಗುಲದಂತೆ ಗರಿಷ್ಠ ಪ್ರಮಾಣದಲ್ಲಿ ಎಚ್ಚರಿಕೆ ವಹಿಸುವುದು, ನಾವು ಪರರಿಗೆ ತೋರಿಸುವ ಪ್ರೀತಿ ಹಾಗೂ ಕಾಳಜಿಯ ಗುರುತು ಎಂದು ಕ್ರೈಸ್ತ ಧಾರ್ಮಿಕ ಮುಖಂಡರು ಮತ್ತೊಮ್ಮೆ ಒತ್ತಿ ಹೇಳಿದ್ದಾರೆ.