ಜು.7: ಕ್ರೈಸ್ತ ಸಮುದಾಯದ ವತಿಯಿಂದ ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಸಾರ್ವಜನಿಕ ಸನ್ಮಾನ
ಉಡುಪಿ: ಕರ್ನಾಟಕ ಸರ್ಕಾರದ ವಿಧಾನ ಪರಿಷತ್ತಿನ ನೂತನವಾಗಿ ಚುನಾಯಿತರಾದ ಐವನ್ ಡಿಸೋಜಾ ಅವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಬಾಸೆಲ್ ಮಿಷನ್ ಮೆಮೋರಿಯಲ್ ಆಡಿಟೋರಿಯಂ, ಮಿಷನ್ ಕಾಂಪೌಂಡ್, ಉಡುಪಿ ಇಲ್ಲಿ ಜುಲೈ 7 ರಂದು ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ಉಡುಪಿ ಧರ್ಮಪ್ರಾಂತ್ಯ ಶ್ರೇಷ್ಠ ಗುರು ವಂದನೀಯ ಫರ್ಡಿನಾಂಡ್ ಗೊನ್ಸಾಲ್ವಿಸ್ ಹೇಳಿದರು.
ಅವರು ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಕಾರ್ಯಕ್ರಮವನ್ನು ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್, ಉಡುಪಿ, ಸಿಎಸ್ಐ, ಯುಬಿಎಂಸಿ, ಆರ್ಥೊಡಾಕ್ಸ್ ಸಿರಿಯನ್ ಚರ್ಚ್ಗಳು, ಕ್ಯಾಥೋಲಿಕ್ ಸಭಾ ಉಡುಪಿ ಪ್ರದೇಶ , ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ ಸ್ತ್ರೀ ಸಂಘಟನೆ, ಭಾರತೀಯ ಕಥೊಲಿಕ್ ಯುವ ಸಂಚಾಲನ, ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಜನರು ಜಂಟಿಯಾಗಿ ಆಯೋಜಿಸಿರುತ್ತಾರೆ. ಅವರು ಎರಡನೇ ಬಾರಿಗೆ ವಿಧಾನಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವುದಕ್ಕೆ ಉಡುಪಿ ಜಿಲ್ಲೆಯ ಜನತೆ ಹಾಗೂ ಕ್ರೈಸ್ತ ಸಮುದಾಯ ವಿಶೇಷ ರೀತಿಯಲ್ಲಿ ಹರ್ಷ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯವು ಐವನ್ ಡಿಸೋಜಾ ಅವರಿಗೆ ಅಭಿನಂದನೆ ಸಲ್ಲಿಸಲು ಮತ್ತು ಅವರಿಗೆ ಎಲ್ಲಾ ಯಶಸ್ಸನ್ನು ಬಯಸಲು ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದರು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೋ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಸಚಿವಾರದ ವಿನಯಕುಮಾರ್ ಸೊರಕೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು ಮತ್ತು ವಂದನೀಯ ಐವನ್ ಸೋನ್ಸ್, ವಂದನೀಯ ಫಾದರ್ ಎಂ.ಸಿ. ಮಥಾಯಿ, ಪಾಸ್ಟರ್ ಸೆಲ್ವ ಕುಮಾರ್, ರೆ.ವಿಜಯ್ ಹಾರ್ವಿನ್ ಗೌರವ ಅತಿಥಿಗಳಾಗಿ ಭಾಗವಹಿಸುವರು.
ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಮ್ ಫಾರ್ ಹ್ಯೂಮನ್ ರೈಟ್ಸ್ ಇದರ ಉಪಾಧ್ಯಕ್ಷರಾದ ಪ್ರಶಾಂತ್ ಜತ್ತನ್ನ ಮಾತನಾಡಿ ಪಂಚಾಯತಿ ಮತ್ತು ತಾಲ್ಲೂಕು/ಜಿಲ್ಲಾಪಂಚಾಯತ್ಗಳ ತಳಮಟ್ಟದಿಂದ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಐವನ್ ಡಿಸೋಜ ಅವರು ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪಕ್ಷದ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಅವರು ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಅವರು 2014 ರಿಂದ 2020 ರವರೆಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಅವರು ಎರಡನೇ ಬಾರಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು ಇದಕ್ಕಾಗಿ ಅವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಐವಾನ್ ಅವರು ತನ್ನ ಕಾಲೇಜು ದಿನಗಳಿಂದಲೂ ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಕಠಿಣ ಸಂದರ್ಭಗಳನ್ನು ಎದುರಿಸುವ ಧೈರ್ಯ ಮತ್ತು ಆತ್ಮವಿಶ್ವಾಸದ ಪಾತ್ರವನ್ನು ಅವರು ಪ್ರದರ್ಶಿಸಿದ್ದಾರೆ. ಐವಾನ್ ಅವರು ಸತ್ಯ ಮತ್ತು ನ್ಯಾಯಕ್ಕಾಗಿ ಜನಿಸಿದ ಹೋರಾಟಗಾರರಾಗಿದ್ದು ಹಲವಾರು ನಿರ್ಗತಿಕ/ಅಸ್ವಸ್ಥ ವ್ಯಕ್ತಿಗಳನ್ನು ತಲುಪಿದ್ದಾರೆ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣವನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಡೆನಿಸ್ ಡೆಸಾ, ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೊ, ಕ್ರೈಸ್ತ ಮುಂದಾಳು ವೆರೋನಿಕಾ ಕರ್ನೆಲಿಯೋ ಉಪಸ್ಥಿತರಿದ್ದರು.