ಜುಬಿಲಿ 2025 ವಿಶೇಷ ಯೋಜನೆ: ತೊಟ್ಟಂ ಚರ್ಚಿನಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣಕ್ಕೆ ಚಾಲನೆ
ಮಲ್ಪೆ: ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಸಾಮಾನ್ಯ ಜುಬಿಲಿ ವರ್ಷದ ಅಂಗವಾಗಿ ಸ್ವಂತ ಮನೆ ಇಲ್ಲದ ಕುಟುಂಬಕ್ಕೆ ಮನೆ ನಿರ್ಮಿಸುವ ವಿಶೇಷ ಯೋಜನೆಯ ಅಂಗವಾಗಿ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಬುಧವಾರ ಚರ್ಚ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಕಾರ್ಯದ ಭೂಮಿ ಪೂಜೆಯ ಅಡಿಗಲ್ಲು ಆಶೀರ್ವಚನ ಕಾರ್ಯ ಜರುಗಿತು.
ಶಿವಮೊಗ್ಗ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಫ್ರಾನ್ಸಿಸ್ ಸೆರಾವೊ ಮನೆ ನಿರ್ಮಾಣ ಅಡಿಗಲ್ಲು ಆಶೀರ್ವಚನ ನೇರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಈ ಜಗತ್ತಿನಲ್ಲಿ ನಾವು ವಿವಿಧ ರೀತಿಯ ದಾನಗಳನ್ನು ಕಾಣುತ್ತೇವೆ. ವಸ್ತು ರೂಪದಲ್ಲಿ ದಾನ ನೀಡುವುದು, ಅಂಗಾಂಗ ದಾನ ಹಾಗೂ ಶರೀರದ ದಾನ. ಪ್ರತಿಯೊಂದು ದಾನವೂ ಕೂಡ ದೇವರಿಗೆ ಪ್ರಿಯವಾದುದಾಗಿದೆ. ತೊಟ್ಟಂ ಅನ್ನಮ್ಮ ದೇವಾಲಯದಲ್ಲಿ ಬಡ ಕುಟುಂಬವೊಂದಕ್ಕೆ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಒಂದು ಉತ್ತಮವಾದ ದಾನವನ್ನು ನೀಡುವ ಮೂಲಕ ಮಾದರಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ. ನಮ್ಮ ಪೂರ್ವಜರು ಒಂದೇ ಕುಟುಂಬವೆಂಬಂತೆ ಬದುಕಿ ಬಾಳಿದವರಾಗಿದ್ದು ಅದೇ ಸಂದೇಶವನ್ನು ಇಂದು ತನ್ನ ಸಮುದಾಯದ ಒರ್ವ ಅಶಕ್ತ ವ್ಯಕ್ತಿಗೆ ಸಹಾಯ ಮಾಡುವ ಮೂಲಕ ಸಾರಲಾಗಿದೆ. ನಮ್ಮಲ್ಲಿ ಇರುವ ಸಂಪತ್ತನ್ನು ಪರಸ್ಪರ ಹಂಚಿಕೊಂಡು ಬಾಳುವ ಮೂಲಕ ದೇವರ ಪ್ರೀತಿಗೆ ಪಾತ್ರರಾಗುತ್ತೇವೆ ಎಂದರು.
ಚರ್ಚಿನ ಪ್ರಧಾನ ಧರ್ಮಗುರು ವಂ|ಡೆನಿಸ್ ಡೆಸಾ ಮಾತನಾಡಿ ಮಾನವನಿಗೆ ಒಂದು ಸ್ವಂತ ಮನೆಯಿದ್ದರೆ ನೆಮ್ಮದಿಯ ನಿದ್ದೆಯನ್ನು ಮಾಡಲು ಸಾಧ್ಯವಿದೆ ಆದರೆ ಇಂದು ಎಷ್ಟೋ ಮಂದಿಗೆ ಜೀವಿಸಲು ಸ್ವಂತ ಮನೆ ಇಲ್ಲದೆ ಪರದಾಡುತ್ತಾರೆ. ಉಡುಪಿ ಧರ್ಮಪ್ರಾಂತ್ಯದಲ್ಲಿ 2025 ಜುಬಿಲಿ ವರ್ಷವಾಗಿ ಆಚರಿಸಲ್ಪಡುತ್ತಿದ್ದು ಈ ನಿಟ್ಟಿನಲ್ಲಿ ಧರ್ಮಾಧ್ಯಕ್ಷರು ಒಂದು ಹೊಸ ಯೋಜನೆಯನ್ನು ನೀಡಿದ್ದಾರೆ. ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ 52 ಚರ್ಚುಗಳಿಂದ್ದು ಪ್ರತಿಯೊಂದು ಚರ್ಚಿನಲ್ಲಿ ಮನೆ ಇಲ್ಲದ ಒಬ್ಬರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ತೊಟ್ಟಂ ಚರ್ಚಿನಲ್ಲಿ ಕೂಡ ಮನೆ ಇಲ್ಲದ ಒಂದು ನಿರ್ಗತಿಕ ಕುಟುಂಬಕ್ಕೆ ಮನೆ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ನನ್ನ ಹುಟ್ಟು ಹಬ್ಬದ ಆಚರಣೆಯನ್ನು ಯಾವುದೇ ಆಡಂಭರ ಮಾಡದೆ ಅದರ ಹಣವನ್ನು ಬಡವರಿಗೆ ಮನೆ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಿಂದ ಉಳಿಕೆಯಾದ ಹಣದಲ್ಲಿ ಈಗಾಗಲೇ ರೂ ಒಂದು ಲಕ್ಷವನ್ನು ಧರ್ಮಾಧ್ಯಕ್ಷರಿಗೆ ಬಡವರಿಗೆ ಮನೆ ನಿರ್ಮಿಸುವ ನಿಟ್ಟಿನಲ್ಲಿ ಹಸ್ತಾಂತರ ಮಾಡಲಾಗಿದೆ. ಇದರೊಂದಿಗೆ ರೂ 50000 ವನ್ನು ಕೋಟ ಚರ್ಚಿಗೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಒಂದು ಶರತ್ತು ಹಾಕಿ ಹುಟ್ಟು ಹಬ್ಬಕ್ಕೆ ಅನುಮತಿ ನೀಡಲಾಗಿತ್ತು ಅದರಂತೆ ಚರ್ಚಿನ ಜನರು ಎಷ್ಟು ಹಣವನ್ನು ಮನೆಗಾಗಿ ಸಂಗ್ರಹಿಸುವರೋ ಅಷ್ಟೇ ಮೊತ್ತವನ್ನು ವೈಯುಕ್ತಿಕವಾಗಿ ತಾನು ನನ್ನ ಕುಟುಂಬ, ಗೆಳೆಯರು ಆತ್ಮೀಯರಿಂದ ಸಂಗ್ರಹಿಸುವ ವಾಗ್ದಾನವನ್ನು ನೀಡಲಾಗಿತ್ತು. ಅದರಂತೆ 12 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ನಿರ್ಮಿಸುವ ಯೋಜನೆ ಹಾಕಲಾಗಿದ್ದು ಚರ್ಚಿನ ತೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿಗಳು ಮನೆ ನಿರ್ಮಾಣಕ್ಕೆ ತಮ್ಮ ಜಮೀನಲ್ಲಿ 5 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡಿದ್ದು ಅದರಲ್ಲಿ ಒರ್ವ ಬಡ ಕುಟುಂಬಕ್ಕೆ ಮನೆ ನಿರ್ಮಿಸಲು ನಿರ್ಧರಿಸಿಲಾಗಿದೆ. ಇಂದು ಮನೆಯ ಅಡಿಗಲ್ಲನ್ನು ಆಶೀರ್ವಚನ ಮಾಡಿದ್ದು, ಕ್ರಿಸ್ಮಸ್ ದಿನದಂದು ಮನೆಯ ಶಂಕುಸ್ಥಾಪನೆ ಕಾರ್ಯ ನೆರವೇರಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ 5 ಸೆಂಟ್ಸ್ ಜಾಗವನ್ನು ಉಚಿತವಾಗಿ ನೀಡಿರುವ ತೋಮಸ್ ಮತ್ತು ವಲೇರಿಯಾನ ನೊರೊನ್ಹಾ ದಂಪತಿಗಳನ್ನು ಧರ್ಮಾಧ್ಯಕ್ಷರು ಚರ್ಚಿನ ಪರವಾಗಿ ಸನ್ಮಾನಿಸಿದರು.
ಈ ವೇಳೆ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸುನೀಲ್ ಫೆರ್ನಾಂಡಿಸ್, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್ ಹಾಗೂ ಇತರರು ಉಪಸ್ಥಿತರಿದ್ದರು.