ಜ್ಯೋತಿ ರಿಕ್ಷಾ ದುರಂತ; ಕಾರು ಚಾಲಕ ಅನೀಶ್ ಜಾನ್ ಅಗೋಸ್ತ್ 18ರ ವರೆಗೆ ನ್ಯಾಯಾಂಗ ಬಂಧನ
ಮಂಗಳೂರು: ಕುಡಿದು ಕಾರು ಚಲಾಯಿಸಿ ಪಾರ್ಕ್ ಮಾಡಿದ್ದ ರಿಕ್ಷಾವೊಂದಕ್ಕೆ ಡಿಕ್ಕಿಹೊಡೆದು ರಿಕ್ಷಾ ಚಾಲಕನ ಸಾವಿಗೆ ಕಾರಣನಾದ ಕಾರು ಚಾಲಕ ಅನೀಶ್ ಜಾನ್ ಗೆ ಅಗಸ್ಟ್ 18 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಅಗಸ್ಟ್ 6 ರಂದು ರಾತ್ರಿ 10.45 ರ ಸುಮಾರಿಗೆ ಪ್ರವೀಣ್ ಎಂಬವರು ತಮ್ಮ ರಿಕ್ಷಾವನ್ನು ಜ್ಯೋತಿ ರಿಕ್ಷಾ ಸ್ಟ್ಯಾಂಡಿನಲ್ಲಿ ಪಾರ್ಕ್ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ತನ್ನ ರಿಟ್ಜ್ ಕಾರನ್ನು ಚಲಾಯಿಸಿಕೊಂಡು ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಮೂರು ಮಂದಿ ರಿಕ್ಷಾಚಾಲಕರು ಹಾಗೂ ಪಾದಾಚಾರಿಯೋರ್ವರಿಗೆ ಗಂಭೀರ ಗಾಯಗಳಾಗಿತ್ತು. ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಪ್ರವೀಣ್ ಕೆಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಸ್ಥಳಕ್ಕೆ ಆಗಮಿಸಿದ ಬಂದರು ಠಾಣೆಯ ಪೋಲಿಸರು ಅನೀಶ್ ಜಾನನ್ನು ಬಂಧಿಸಿದ್ದರು ಈ ವೇಳೆ ಆತನ ಕಾರಿನಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು.
ಮಂಗಳವಾರ ಅನೀಶ್ ಜಾನನನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ್ದು ನ್ಯಾಯಾಧೀಶರು ಅಗೋಸ್ತ್ 18ರ ತನಕ ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.