ಟಿಪ್ಪು ದತ್ತಮಾಲ ಜಯಂತಿ: ಅಹಿತಕರ ಘಟನೆ ನಡೆದಲ್ಲಿ ಆಯೋಜಕರೇ ಜವಾಬ್ದಾರಿ: ಅಣ್ಣಾಮಲೈ
ಚಿಕ್ಕಮಗಳೂರು: ಟಿಪ್ಪು ಜಯಂತಿ ಹಾಗೂ ದತ್ತಮಾಲ ಅಭಿಯಾನ ಹತ್ತಿರದಲ್ಲಿರುವುದರಿಂದ ಹಾಗೂ ಇದಕ್ಕೆ ಕೆಲ ರಾಜಕೀಯ ಪಕ್ಷಗಳು ಮತ್ತು ಹಿಂದೂ ಪರ ಸಂಘಟನೆಗಳ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಪೋಲಿಸ್ ಇಲಾಖೆ ಸೋಮವಾರ ಮಧ್ಯರಾತ್ರಿಯಿಂದಲೇ ಅನ್ವಯಿಸಿ ಇದೇ ನವೆಂಬರ್ 11 ರ ಬೆಳಗ್ಗಿನವರೆಗೆ ಕಲಂ 144 ಸಿಆರ್ ಪಿ ಸಿ ಸೆಕ್ಷನ್ ಜಾರಿಗೆಗೊಳಿಸಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗ ಕೆ ಅಣ್ಣಾಮಲೈ ತಿಳಿಸಿದ್ದಾರೆ.
ಅವರು ಮಾಧ್ಯಮಗೋಷ್ಟಿಯಲ್ಲಿ ಮಾಹಿತಿ ನೀಡಿ ನವೆಂಬರ್ 10 ರಂದು ರಾಜ್ಯಾದ್ಯಂತ ಟಿಪ್ಪು ಜಯಂತಿ ಹಾಗೂ ಜಿಲ್ಲೆಯ ಶ್ರೀರಾಮ ಸೇನೆ ವತಿಯಿಂದ ಇದೇ 12 ರಿಂದ 20 ರವರೆಗೆ ದತ್ತಮಾಲ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಿಂಸಾತ್ಮಕ ಕೃತ್ಯ ನಡೆಯದಂತೆ ಮತ್ತು ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಕಲಂ144 ಸಿಆರ್ಪಿಸಿ ಸೆಕ್ಷನ್ ಜಾರಿ ಮಾಡಲಾಗಿದೆ. ಟಿಪ್ಪು ಜಯಂತಿ ಹಿನ್ನಲೆಯಲ್ಲಿ 12 ಕಡೆ ಚೆಕ್ ಪೋಸ್ಟ್ ತೆರೆಯಲಾಗುವುದು. ದತ್ತಮಾಲಾ ಅಭಿಯಾನದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ 21 ಕಡೆ ಚೆಕ್ ಪೋಸ್ಟ್ ತೆರೆಯಲಾಗುವುದು ಎಂದರು.
ಸುಮಾರು 129 ಕಮ್ಯೂನಲ್ ಗೂಂಡಾಗಳನ್ನು ಗುರುತಿಸಲಾಗಿದ್ದು, ದತ್ತಮಾಲ ಅಭಿಯಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಾರ್ಯಕ್ರಮ ಆಯೋಜಕರ ಸಭೆ ನಡೆಸಲಾಗಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ವಿವಿಧ ಸಂಘಟನೆಗಳಿಂದ ಹಾಗೂ ಗುರುತಿಸಲ್ಪಟ್ಟ ಕೆಲ ಮತೀಯ ಗೂಂಡಾ ಹಾಗೂ ರೌಡಿಗಳಿಂದ ರೂ 1 ಲಕ್ಷದ ಇಂಡೆಮ್ನಿಟಿ ಬಾಂಡ್ ಸಂಬಂಧಪಟ್ಟ ತಹಶೀಲ್ದಾರರಿಂದ ಪಡೆಯಲಾಗಿದೆ. ಒಂದು ವೇಳೆ ಅಂದು ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರನ್ನ ಕೃತ್ಯಗಳಿಗೆ ನೇರ ಹೊಣೆ ಮಾಡಲಾಗುವುದು. ಜಿಲ್ಲೆಗೆ ಬರುವ ಹಾಗೂ ಹೊರ ಹೋಗುವ ಅನುಮಾನಸ್ಪದ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಲು ಕಾರ್ಯನಿರ್ವಾಹಕ ದಂಡಾಧಿಕಾರಿ ನೇಮಿಸಲಾಗುವುದು ಎಂದರು.
144 ಸೆಕ್ಷನ್ ಜಾರಿಯಲ್ಲಿರುವಾಗ ಟಿಪ್ಪು ಜಯಂತಿ ಆಚರಣೆ ವೇಳೆ ಯಾವುದೇ ರೀತಿ ಮೆರವಣಿಗೆ ಕೈಗೊಳ್ಳುವಂತಿಲ್ಲ. ಸಾರ್ವಜನಿಕರು ಮೆರವಣಿಗೆ ಹಾಗೂ ಸಭೆ, ಸಮಾರಂಭ ನಡೆಸುವಂತಿಲ್ಲ ಒಂದು ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ್ದಲ್ಲಿ ಅಂತಹವರ ವಿರುದ್ದ ಐಪಿಸಿ ಸೆಕ್ಷನ್ 188 ರ ಪ್ರಕಾರ ಶಿಕ್ಷೆಗೆ ಗುರುಪಡಿಸಬೇಕಾಗುತ್ತದೆ ಎಂದು ಖಡಕ್ಕ್ ಎಚ್ಚರಿಕೆ ನೀಡಿದರು.
ಟಿಪ್ಪು ಜಯಂತಿ ಹಾಗೂ ದತ್ತಮಾಲ ಅಭಿಯಾನದ ಪ್ರಯುಕ್ತ ಭದ್ರತೆ ದೃಷ್ಟಿಯಿಂದ ಹೆಚ್ಚಿನ ಪೋಲಿಸ್ ಸಿಬಂದಿ ನಿಯೋಜಿಸಲಾಗಿದೆ. ಒಟ್ಟು 1068ಸಿಬಂದಿ, 6 ಡಿಎಆರ್ ತುಕಡಿ, 4 ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ ಎಂದರು.
ಕೋಮುಸೌಹಾರ್ದ ವೇದಿಕೆಯಿಂದ ಟಿಪ್ಪು, ಭಗತ್ ಸಿಂಗ್, ಹಾಗೂ ಮದರ್ ತೆರೆಸಾ ಸ್ಮರಣಾ ಕಾರ್ಯಕ್ರಮ ಆಚರಣೆಗೆ ಸಂಬಂಧಿಸಿದಂತೆ ಅವರ ಜತೆ ಇದೇ 20 ರ ನಂತರ ಚರ್ಚಿಸಲಾಗುವುದು ಎಂದರು.