ಟೀಕೆ ಮಾತ್ರ ರಾಜಕಾರಣ ಎಂದು ತಿಳಿದಿರುವ ಬಿಜೆಪಿ ಶಾಸಕರುಗಳು – ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ. ಇವತ್ತು ಅಲ್ಪಸಂಖ್ಯಾತರ ತುಷ್ಠಿಕರಣದ ಬಜೆಟ್ ಎನ್ನುವ ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರುಗಳು ತಮ್ಮ, ತಮ್ಮ ಕ್ಷೇತ್ರಕ್ಕೆ ತಂದ ಯೋಜನೆಗಳನ್ನು ಸಾರ್ವಜನಿಕವಾಗಿ ತಿಳಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಸವಾಲು ಹಾಕಿದ್ದಾರೆ
ಕೋಳಿ ಅಂಕಕ್ಕೆ ಅನುಮತಿ ಕೇಳುವ ಉಡುಪಿ ಜಿಲ್ಲೆಯ ಬಿಜೆಪಿ ಶಾಸಕರಿಗೆ ಸಕ್ಕರೆ ಕಾರ್ಖಾನೆ, ವರಾಹಿ ಯೋಜನೆ, ಸರ್ಕಾರಿ ವೈದ್ಯಕೀಯ ಕಾಲೇಜು, ಪ್ರವಾಸೋದ್ಯಮ ಅಭಿವೃದ್ಧಿ, ಕಿಂಡಿ ಅಣೆಕಟ್ಟುಗಳು, ಬ್ರಹ್ಮಾವರದಲ್ಲಿ ಕೃಷಿ ವಿಜ್ಞಾನ ಕಾಲೇಜು, ಪಶು ಆಹಾರ ಘಟಕ ಸ್ಥಾಪನೆ, ಉದ್ಯೋಗವಕಾಶ ಕಲ್ಪಿಸುವ ಉದ್ಯಮ ಹಾಗೂ ಉದ್ದಿಮೆಗಳು, ಉಪ ಸಾರಿಗೆ ಆಯುಕ್ತರ ಕಚೇರಿ ಇದು ಯಾವುದು ನೆನಪು ಬಾರದೇ ಇದ್ದದ್ದು ನಿಮ್ಮನ್ನು ಆಯ್ಕೆ ಮಾಡಿದ ಜನತೆಗೆ ನೀವು ಮಾಡಿದ ದ್ರೋಹ.
ಕೇವಲ ಟೀಕೆ ಮಾತ್ರ ರಾಜಕಾರಣ ಎಂದು ತಿಳಿದಿರುವ ಜಿಲ್ಲೆಯ ಬಿಜೆಪಿ ಶಾಸಕರುಗಳು ಮುಖ್ಯಮಂತ್ರಿಗಳ ಬಳಿ ಹೋಗಿ ಬಜೆಟ್ ಮೇಲಿನ ಚರ್ಚೆಯಲ್ಲಿ ಜಿಲ್ಲೆಯ ಬೇಡಿಕೆಗಳ ಪಟ್ಟಿ ಇಡಬೇಕು ಹಾಗೂ ಬಜೆಟ್ ನಲ್ಲಿ ಇನ್ನೂ ಸೇರ್ಪಡೆಗೆ ಅವಕಾಶ ಇರುವುದು ಇವರ ಗಮನದಲ್ಲಿ ಇಟ್ಟುಕೊಂಡು ಮುಖ್ಯಮಂತ್ರಿಗಳು ಬಜೆಟ್ ಚರ್ಚೆಗೆ ಕೊನೆಗೆ ಉತ್ತರಿಸುವಾಗ ಉಡುಪಿ ಜಿಲ್ಲೆಯ ಜನತೆಯ ಬೇಡಿಕೆಗಳನ್ನು ಪೂರೈಸುವ ಕೆಲಸವಾದರೂ ಆಗಲಿ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.