ಟೆಂಡರ್ ಮೂಲಕವೇ ಕುಡಿಯುವ ನೀರಿನ ಪೂರೈಕೆ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್  ಸೂಚನೆ

Spread the love

ಟೆಂಡರ್ ಮೂಲಕವೇ ಕುಡಿಯುವ ನೀರಿನ ಪೂರೈಕೆ – ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್  ಸೂಚನೆ 

ಮಂಗಳೂರು: ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರತಿ ಗ್ರಾಮಗಳನ್ನು ಗಮನಿಸಿ ಕುಡಿಯುವ ನೀರಿನ ಪೂರೈಕೆ ಕಾರ್ಯ ಕೈಗೊಳ್ಳಬೇಕು. ಇದಕ್ಕಾಗಿ ಸಂಭವನೀಯ ಗ್ರಾಮಗಳನ್ನು ಗುರುತಿಸಿ ಟೆಂಡರ್ ಪ್ರಕ್ರಿಯೆ ನಡೆಸಿ, ನೀರು ಪೂರೈಕೆ ಮಾಡಲು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಸೂಚಿಸಿದ್ದಾರೆ.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದ ತಹಶೀಲ್ದಾರ್‍ಗಳಿಂದ ಪಡೆದ ಅವರು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಟೆಂಡರ್ ಕರೆಯದೇ ಪ್ರಕ್ರಿಯೆ ನಡೆಸಬಾರದು. ಜಿಪಿಎಸ್ ಅಳವಡಿಸಿದ ಟ್ಯಾಂಕರ್‍ಗಳನ್ನೇ ಬಳಸಿಕೊಳ್ಳಬೇಕು ಎಂದರು.

ಬಿಸಿಲಿನ ಶಾಖದಿಂದ ಜನರಿಗೆ ಹಾಗೂ ಜಾನುವಾರುಗಳಿಗೆ ಸಾವು ನೋವು ಸಂಭವಿಸದಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು. ಜೊತೆಗೆ ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ಮೇವು ಮತ್ತು ಶೆಡ್‍ಗಳ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ತೀವ್ರ ಉಷ್ಣಾಂಶದ ಹೆಚ್ಚಳ ಹಾಗೂ ಬಿಸಿಗಾಳಿ ಹಿನ್ನಲೆಯಲ್ಲಿ ಆಕಸ್ಮಿಕ ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ಕಲ್ಪಿಸಿ ಕೊಡಬೇಕು. ಇಂತಹ ಪರಿಸ್ಥಿತಿ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಜಿಲ್ಲಾ ಆರೋಗ್ಯ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖಾಂತರ ಮಾಡಬೇಕು ಹಾಗೂ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲೆಯಲ್ಲಿ ತೀವ್ರ ಉಷ್ಣಾಂಶದ ಹೆಚ್ಚಳ ಹಾಗೂ ಬಿಸಿಗಾಳಿ ಪರಿಸ್ಥಿತಿಯನ್ನು ನಿಭಾಯಿಸಲು ಸಂಬಂಧಪಟ್ಟ ಇಲಾಖೆಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗ ಸೂಚಿಯಲ್ಲಿ ತಿಳಿಸಿರುವ ಮಾನದಂಡಗಳನ್ನು ಅನುಸರಿಸಬೇಕು, ಮತ್ತು ಅಂತಹ ಪ್ರದೇಶಗಳ ಮೇಲೆ ನಿಗಾವಹಿಸಬೇಕು ಎಂದು ಸಿಂಧೂ ರೂಪೇಶ್ ಸೂಚಿಸಿದರು.

ಸಭೆಯಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರ್‍ಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love