ಡಾ.ಪ್ರಭುಶಂಕರ್ ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಡಾ. ಎನ್.ಎಸ್. ತಾರಾನಾಥ್
ಡಾ. ಪ್ರಭುಶಂಕರ ಯಾವುದೇ ಹುದ್ದೆಗಳನ್ನು, ಪದವಿಗಳನ್ನು ಬಯಸದೆ ಇತರರಿಗೋಸ್ಕರ ತಮ್ಮ ಜೀವನವನ್ನು ತೇಯ್ದ ವ್ಯಕ್ತಿ. ಇವರು ಇತರರ ಸಮಸ್ಯೆ, ತೊಂದರೆಗಳಿಗೆ ಮಿಡಿಯುವಂತಹ ಅಂತಃಕರಣ ಹೊಂದಿದ್ದವರು ಎಂದು ಡಾ.ಎನ್ಎಸ್. ತಾರಾನಾಥ್ ಹೇಳಿದರು.
ಇವರು ಆಳ್ವಾಸ್ ನುಡಿಸಿರಿಯ ಎರಡನೇ ದಿನ ನಡೆದ ಡಾ. ಪ್ರಭುಶಂಕರ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಪ್ರಭುಶಂಕರ ಇತರರ ಸಮಸ್ಯೆಯನ್ನು ಸ್ವಇಚ್ಛೆಯಿಂದ ಬಗೆಹರಿಸುತ್ತಿದ್ದರು. ಮೇಣದ ಮುದ್ದೆಯಂತಿದ್ದ ವಿದ್ಯಾರ್ಥಿಗಳನ್ನು ಶಿಲ್ಪಗಳಾಗಿ ರೂಪಿಸಿದವರು. ಕೇವಲ ಪಾಠ ಹೇಳುವ ಒಬ್ಬ ಶುಷ್ಕ ಅಧ್ಯಾಪಕನಾಗಿರದೇ ವಿದ್ಯಾರ್ಥಿಗಳನ್ನು ಮುಂದಿನ ಜೀವನಕ್ಕೆ ರೂಪಿಸುವಂತಹ ಕಾರ್ಯವನ್ನು ಕೈಗೊಂಡಿದ್ದವರು. ಇವರು ವಿದ್ಯಾರ್ಥಿಗಳ ಕಷ್ಟಕ್ಕೆ ಒದಗಿ ಬರುತ್ತಿದ್ದ ಒಬ್ಬ ಸಹೃದಯಿ ಅಧ್ಯಾಪಕರಾಗಿದ್ದರು ಎಂದು ಅವರನ್ನು ನೆನಪಿಸಿಕೊಂಡರು.
ಡಾ. ಪ್ರಭುಶಂಕರ್ ಜೀವನದಲ್ಲಿ ಪ್ರಭಾವ ಬೀರಿದ ಅಂಶಗಳ ಬಗ್ಗೆ ಚರ್ಚಿಸಿದ ಡಾ.ಎಸ್.ಎನ್.ತಾರಾನಾಥ್, ಕುವೆಂಪು ಅವರ ಬಗೆಗಿನ ಗೌರವ, ಶ್ರದ್ಧೆ, ನಿಷ್ಠೆ ಹಾಗೂ ರಾಮಕೃಷ್ಣ ಅವರೊಂದಿಗೆ ಇದ್ದ ಸಂಪರ್ಕ, ಆಧ್ಯಾತ್ಮದ ಬಗ್ಗೆ ಇದ್ದ ಸೆಳೆತ ಡಾ. ಪ್ರಭುಶಂಕರರ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ಅಂಶಗಳಾಗಿದ್ದವು. ಇವರು ಕುವೆಂಪುರವರ ಆತ್ಮೀಯ ವಿದ್ಯಾರ್ಥಿಯಾಗಿದ್ದವರು. “ಹೀಗಿದ್ದರು ಕುವೆಂಪು” ಎಂಬ ಕೃತಿಯಲ್ಲಿ ಕುವೆಂಪುರವರೊಂದಿಗಿನ ಅನೇಕ ಮಹತ್ವದ ಘಟನೆಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.
ಡಾ. ಪ್ರಭುಶಂಕರ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ನಾಟಕ, ಅನುವಾದ, ವಿಮರ್ಶೆ, ಪ್ರವಾಸ ಕಥನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ವ್ಯಕ್ತಿ ಚಿತ್ರ ಬರಹಗಾರರಾಗಿ ಅನೇಕ ಮಹತ್ವದ ವ್ಯಕ್ತಿಚಿತ್ರಗಳನ್ನು ನೀಡಿದ್ದಾರೆ. ಈ ಪ್ರಾಂತ್ಯಕ್ಕೆ ಸಂಬಂಧಿಸಿದಂತಹ “ಪಡುಬಿದ್ರೆಯ ಅಮ್ಮ” ಎಂಬ ಅಪೂರ್ವವಾದ ಜೀವನ ಚರಿತ್ರೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಸಾಹಿತ್ಯಕ್ಕೆ ಡಾ. ಪ್ರಭುಶಂಕರ್ರವರ ಕೊಡುಗೆಯನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ-2018ರ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಮಲ್ಲಿಕಾ. ಎಸ್. ಘಂಟಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾದ ಡಾ. ನಾ. ದಾಮೋದರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕರಾರ ಶಿವಪ್ರಸಾದ್ ಎಂ. ನಿರೂಪಿಸಿದರು.