ಡಾ| ಮೋಹನ ಆಳ್ವರಿಗೆ ರಂಗಮನೆ ಪ್ರಶಸ್ತಿ
ಸುಳ್ಯ : ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದ ಆಶ್ರಯದಲ್ಲಿ ಫೆಬ್ರವರಿ 2,3 ಮತ್ತು 4 ರಂದು 16ನೇ ವರ್ಷದ “ರಂಗಸಂಭ್ರಮ- 2018” ರಾಜ್ಯ ಮಟ್ಟದ ಸಾಂಸ್ಕೃತಿಕ ಉತ್ಸವವನ್ನು ಏರ್ಪಡಿಸಲಾಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಇವರ ಅಧ್ಯಕ್ಷತೆಯಲ್ಲಿ ಹಿರಿಯ ನಾಟಕಕಾರ ಡಾ. ಡಿ. ಎಸ್. ಚೌಗಲೆ ಬೆಳಗಾವಿ ಇವರು ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಕೆ. ಮೋಹನ ರಾವ್ ಹಾಗೂ ಪೆÇಪ್ಯುಲರ್ ಎಜ್ಯುಕೇಶನ್ ಸೊಸೈಟಿ ಅರಂತೋಡು ಇದರ ಅಧ್ಯಕ್ಷರಾದ ಪಿ.ಬಿ. ದಿವಾಕರ ರೈಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ನೇತಾರ, ಶಿಕ್ಷಣ ತಜ್ಞ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ| ಎಂ. ಮೋಹನ ಆಳ್ವರನ್ನು 2018 ರ ರಂಗಮನೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಫೆ. 4 ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಕೆ. ಸೀತಾರಾಮ ರೈ ಸವಣೂರು ವಹಿಸಲಿದ್ದು, ಖ್ಯಾತ ರಂಗ ವಿಮರ್ಶಕ ಗುಡಿಹಳ್ಳಿ ನಾಗರಾಜ ಬೆಂಗಳೂರು ಇವರು ಸಮಾರೋಪ ನುಡಿಯನ್ನು ನುಡಿಯಲಿದ್ದಾರೆ. ಲೇಖಕಿ ಡಾ. ಕಾತ್ಯಾಯಿನೀ ಕುಂಜಿಬೆಟ್ಟು ಹಾಗೂ ಪತ್ರಕರ್ತೆ ಡಾ. ಸೀತಾಲಕ್ಷ್ಮೀ ಕರ್ಕಿಕೋಡಿ ಇವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಡ್ರಾಮಾ ಜ್ಯೂನಿಯರ್ಸ್‍ನಲ್ಲಿ ಪ್ರಥಮ ಪ್ರಶಸ್ತಿ ಪಡೆದ ಸುಳ್ಯದ ಬಾಲ ಕಲಾವಿದೆ ಕುಮಾರಿ ವಂಶಿ ರತ್ನಕುಮಾರ್ ಇವರಿಗೆ ರಂಗಮನೆ ಪ್ರತಿಭಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು
ಫೆ. 2 ರಂದು ಸಂಜೆ 5.45ರಿಂದ ವಳಕುಂಜ ಕುಮಾರ ಸುಬ್ರಹ್ಮಣ್ಯ ನಿರ್ದೇಶನದಲ್ಲಿ ಸುಜನಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ‘ಯಕ್ಷ ತಾಳ-ಲಯ ಝೇಂಕಾರ’, ವಿನಯ್ ಹೆಗಡೆ ಬೆಂಗಳೂರು ಇವರಿಂದ ಬ್ರಶ್ ಕ್ಯಾನ್ವಾಸ್ ಇಲ್ಲದೆ ಗಾಳಿಯಲ್ಲೇ ಚಿತ್ರ ಮೂಡಿಸುವ ‘ಕಾಸ್ಮಿಕ್ ಸ್ಪ್ಲಾಷ್’ ಮತ್ತು ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ‘ಸುದರ್ಶನ ವಿಜಯ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಫೆ 3 ರಂದು ಸಂಜೆ 6.00 ರಿಂದ ಧಾರವಾಡದ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರೀ ಹಿರೇಮಠ ಇವರಿಂದ ‘ರಂಗಗೀತೆ- ತತ್ವಪದ-ವಚನಗಳು’; ಆಳ್ವಾಸ್‍ನ ಬಾಲ ಪ್ರತಿಭೆ ಮಾ| ಮನುಜ ನೇಹಿಗ ಸುಳ್ಯ ಇವರಿಂದ ‘ದಶ ಕಲಾ ಕೌಶಲ್ಯ’ ಮತ್ತು ಗುರು ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಉಡುಪಿಯ ವಲ್ಲರಿ ಕಡೇಕರ್ ಅಭಿನಯದ ಏಕ ವ್ಯಕ್ತಿ ಪ್ರಯೋಗ ‘ಶೂರ್ಪನಖಾ ಇನ್ನೊಂದು ಮುಖ’ ಪ್ರಸ್ತುತಗೊಳ್ಳಲಿದೆ.
ಫೆ. 4 ರಂದು ಸಂಜೆ 5.30 ರಿಂದ ಶ್ರೀಮತಿ ಪ್ರಾರ್ಥನಾ ಸಾಯಿ ನರಸಿಂಹನ್ ಚೆನ್ನೈ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’; ಬೆಂಗಳೂರಿನ ಕು| ಪ್ರತೀಕ್ಷಾ ಭಟ್ ಇವರಿಂದ ‘ರಷ್ಯನ್ ರಿಂಗ್ ಚಮತ್ಕಾರ’ ಹಾಗೂ ಕೆ.ವಿ. ಸುಬ್ಬಣ್ಣ ರಂಗ ಸಮೂಹ ಹೆಗ್ಗೋಡು ಅಭಿನಯಿಸುವ, ಮಂಜುನಾಥ್ ಎಲ್. ಬಡಿಗೇರ ನಿರ್ದೇಶನದ ‘ಸಂದೇಹ ಸಾಮ್ರಾಜ್ಯ’ ನಾಟಕ ಪ್ರದರ್ಶನಗೊಳ್ಳಲಿದೆ.
ಸಮಯಕ್ಕೆ ಸರಿಯಾಗಿ ಆರಂಭವಾಗಲಿರುವ ಈ ಉತ್ಸವಕ್ಕೆ ಪ್ರವೇಶ ಉಚಿತವಾಗಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಮನೆಯ ಅಧ್ಯಕ್ಷ ಜೀವನ್‍ರಾಂ ಸುಳ್ಯ ತಿಳಿಸಿದ್ದಾರೆ.