ಡಾ.ರಾಜೇಂದ್ರ ಕುಮಾರ್ ಅವರ ಅದ್ದೂರಿ ರಜತ ಸಂಭ್ರಮಕ್ಕೆ ಸಾಕ್ಷಿಯಾದ ಮಂಗಳೂರು

Spread the love

ಡಾ.ರಾಜೇಂದ್ರ ಕುಮಾರ್ ಅವರ ಅದ್ದೂರಿ ರಜತ ಸಂಭ್ರಮಕ್ಕೆ ಸಾಕ್ಷಿಯಾದ ಮಂಗಳೂರು

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 25 ವರ್ಷ ಅಧ್ಯಕ್ಷತೆ ವಹಿಸಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರಜತ ಸಂಭ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶ ನಗರದ ನೆಹರೂ ಮೈದಾನದಲ್ಲಿ ಅದ್ದೂರಿಯಾಗಿ ಜರುಗಿತು.

ಕಾರ್ಯಕ್ರಮವನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ಆರ್ಥಿಕ ಚೈತನ್ಯಕ್ಕೆ ಸಹಕಾರಿ ತತ್ವ ಉತ್ತಮ ತಳಹದಿ. ಈ ಕ್ಷೇತ್ರದಿಂದ ಆರ್ಥಿಕ ಸುಧಾರಣೆ ಸಾಧ್ಯ ಎಂದು ಅವರು ಹೇಳಿದರು. ಸಹಕಾರಿ ಕ್ಷೇತ್ರದ ತತ್ವದ ವಿಜೃಂಭಣೆಯ ಕಾರ್ಯಕ್ರಮವಾಗಿ ಇಂದು ಈ ಕಾರ್ಯಕ್ರಮ ನಡೆಯುತ್ತಿದೆ ಎಂದು ಶ್ಲಾಘಿಸಿದ ಅವರು, ಡಾ. ರಾಜೇಂದ್ರ ಕುಮಾರ್ ಸಹಕಾರಿ ರಂಗಕ್ಕೆ ಶಕ್ತಿಯನ್ನು ತುಂಬಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಹಕಾರಿ ಕ್ಷೇತ್ರವನ್ನು ಇತ್ತೀಚೆಗೆ ಪ್ರವೇಶಿಸಿದವರು ನಿರ್ಲಕ್ಷ ತೋರದೆ, ಸಂಘ ಚಿಕ್ಕದಾಗಿದ್ದರೂ, ಕಡಿಮೆ ವ್ಯವಹಾರವಿದ್ದರೂ ಅದನ್ನು ಬಲಪಡಿಸುವಲ್ಲಿ ಶ್ರಮಿಸಬೇಕು. ತಮ್ಮ ಊರಿನ ಸಂಘಗಳನ್ನು ಶ್ರದ್ಧಾ ಮನೋಭಾವದ ಸಮರ್ಪಣೆಯೊಂದಿಗೆ ಮುನ್ನಡೆಸಬೇಕು ಎಂದು ಅವರು ಸಹಕಾರಿಗಳಿಗೆ ಕಿವಿಮಾತು ಹೇಳಿದರು.

ಸ್ವಸಹಾಯ ಸಂಘಗಳು ಹಾಗೂ ನವೋದಯ ಗುಂಪುಗಳಿಂದಾಗಿ ಇಂದು ಮಹಿಳೆಯರ ಸಬಲೀಕರಣವಾಗಿದೆ. ವ್ಯವಹಾರ ಜ್ಞಾನವೇ ಸಾಕ್ಷರತೆಯ ಮೂಲ ಉದ್ದೇಶವಾಗಿದ್ದು, ಅಕ್ಷರ ಜ್ಞಾನ ಇಲ್ಲದ ಮಹಿಳೆಯರು ಕೂಡಾ ವ್ಯಾವಹಾರಿಕವಾಗಿ ಇಂದು ಸಶಕ್ತರಾಗಿದ್ದಾರೆ. ಜೀವನ ಪರೀಕ್ಷೆಯನ್ನು ಎದುರಿಸುವ ಶಕ್ತಿಯನ್ನು ಸ್ವಸಹಾಯ ಗುಂಪುಗಳು ನೀಡಿವೆ. ಪ್ರಗತಿಪರ ರಾಷ್ಟ್ರಗಳಲ್ಲಿ ಸಹಕಾರಿ ತತ್ವಕ್ಕಿಂತ ಒಳ್ಳೆಯ ತತ್ವ ಬೇರಿಲ್ಲ. ಸಹಕಾರಿ ತತ್ವದಲ್ಲಿ ಮಾತ್ರವೇ ಸಮಾಜದ ಕಟ್ಟಕಡೆಯ ವ್ಯಕಿಯೂ ಸಂಘದ ಸದಸ್ಯನಾಗಿ ವ್ಯವಹಾರದಲ್ಲಿ ತೊಡಗಿಸಿಕೊಂಡು ಸಾಧನೆಯನ್ನು ಮಾಡಲು ಸಾಧ್ಯ ಎಂದು ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.

ಕೇಂದ್ರದ ರಾಸಾಯನಿಕ, ರಸಗೊಬ್ಬರ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆ ಸಚಿವ ಡಿ.ವಿ.ಸದಾನಂದ ಗೌಡ, ರಾಜ್ಯದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪುರ್, ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ತು ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ, ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ತು ಸದಸ್ಯರಾದ ಎಸ್.ಎಲ್.ಭೋಜೇಗೌಡ, ಕೆ. ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮೊದಾಲಾದವರು ಅತಿಥಿಗಳಾಗಿ ಪಾಲ್ಗೊಂಡರು.

ಅಭಿನಂದನಾ ಸಮಿತಿಯ ಅಧ್ಯಕ್ಷ ಐಕಳ ಬಾವ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಲ್ಲಿ 25 ವರ್ಷ ಅಧ್ಯಕ್ಷತೆ ವಹಿಸಿರುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ರಜತ ಸಂಭ್ರಮ ಮತ್ತು ನವೋದಯ ಸ್ವಸಹಾಯ ಸಂಘಗಳ ವಿಂಶತಿ ಸಮಾವೇಶದ ಪ್ರಯುಕ್ತದ ಮೆರವಣಿಗೆಗೆ ನಗರದ ಕೊಡಿಯಾಲ್ ಬೈಲ್ ನ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕೇಂದ್ರ ಕಚೇರಿ ಎದುರು ಕೇಂದ್ರ ಸಚಿವ ಸದಾನಂದ ಗೌಡ ಚಾಲನೆ ನೀಡಿದರು.


Spread the love