ಡಾl ಮಿರ್ಜಾ ಬಷೀರ್ ಅವರ ʼಅಬ್ರಕಡಬ್ರʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

Spread the love

ಡಾl ಮಿರ್ಜಾ ಬಷೀರ್ ಅವರ ʼಅಬ್ರಕಡಬ್ರʼ ಕೃತಿಗೆ ʼಮುಸ್ಲಿಮ್ ಸಾಹಿತ್ಯ ಪ್ರಶಸ್ತಿʼ

ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್ ಬರಹಗಾರರ ಅತ್ಯುತ್ತಮ ಕೃತಿಗೆ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿ ವರ್ಷ ಕೊಡಮಾಡುವ 2023ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಸಾಹಿತಿ, ಕತೆಗಾರ ಡಾl ಮಿರ್ಜಾ ಬಷೀರ್‌ ಅವರ ʼಅಬ್ರಕಡಬ್ರʼ ಕಥಾಸಂಕಲನ ಆಯ್ಕೆಯಾಗಿದೆ.

ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದು, ಕೆ.ಪಿ.ಎಸ್.ಸಿ. ಪರೀಕ್ಷೆ ಮೂಲಕ ಸರ್ಕಾರಿ ಸೇವೆಗೆ ಸೇರ್ಪಡೆಯಾಗಿ, ಪಶು ಸಂಗೋಪನಾ ಇಲಾಖೆಯಲ್ಲಿ ಸುಮಾರು 34 ವರ್ಷಗಳ ಕಾಲ ಪಶು ವೈದ್ಯರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿರುವ ಡಾl ಮಿರ್ಜಾ ಬಷೀರ್‌ ಮೂಲತಃ ಚಿತ್ರದುರ್ಗದ ಚಳ್ಳಕೆರೆಯವರು.

ʼಬಟ್ಟೆಯಿಲ್ಲದ ಊರಿನಲ್ಲಿʼ, ʼಜಿನ್ನಿʼ, ಹಾಗೂ ʼಹಾರುವ ಹಕ್ಕಿ ಮತ್ತು ಇರುವೆʼ ಡಾl ಮಿರ್ಜಾ ಬಷೀರ್‌ ಅವರ ಇತರ ಪ್ರಕಟಿತ ಕಥಾಸಂಕಲನಗಳು. ʼಗಂಗೆ ಬಾರೆ ಗೌರಿ ಬಾರೆʼ ಇವರ ಪ್ರಕಟಿತ ಪಶುವೈದ್ಯ ವೃತ್ತಿಯ ಅನುಭವ ಕಥನ. ಈವಾಗ ತುಮಕೂರಿನಲ್ಲಿ ವಾಸವಾಗಿರುವ ಡಾ. ಮಿರ್ಜಾ ಬಷೀರ್ ಅವರ ಅನೇಕ ಕಥೆಗಳು ನಾಡಿನ ಹಲವು ದಿನಪತ್ರಿಕೆ ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ ಕಥೆಗಳು ಹಲವು ವಿಶ್ವವಿದ್ಯಾಲಯ ಗಳ ಪದವಿ ಪಠ್ಯಗಳಲ್ಲಿ ಸೇರ್ಪಡೆಗೊಂಡಿವೆ. ಇವರ ʼತಬ್ಬಲಿಗಳುʼ ನಾಟಕ ಕೃಷಿ ವಿಶ್ವವಿದ್ಯಾಲಯದ ಮೊದಲ ವರ್ಷದ ಪದವಿಗೆ ಪಠ್ಯವಾಗಿದೆ. ಡಾl ಮಿರ್ಜಾ ಬಷೀರ್‌ ಅವರ ಕಥೆಗಳು ಕೇರಳ ರಾಜ್ಯದ 9ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ಸೇರ್ಪಡೆಗೊಂಡಿದ್ದು, ಕೆಲವು ಕಥೆಗಳು ತೆಲುಗಿಗೆ ಭಾಷಾಂತರವಾಗಿವೆ.

ಡಾl ಮಿರ್ಜಾ ಬಷೀರ್‌ ಅವರ ‘ಜಿನ್ನಿ’ ಕಥಾಸಂಕಲನಕ್ಕೆ ಕರ್ನಾಟಕ ಸಂಘ, ಶಿವಮೊಗ್ಗ ಇವರಿಂದ ಲಂಕೇಶ್ ಪ್ರಶಸ್ತಿ ಮತ್ತು ಅನನ್ಯ ಪ್ರಕಾಶನ, ತುಮಕೂರು ಇವರಿಂದ ಕೆ. ಸಾಂಬಶಿವಪ್ಪ ಸ್ಮಾರಕ ಸಾಹಿತ್ಯ ಪ್ರಶಸ್ತಿ, ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾಸಂಕಲನಕ್ಕೆ ಸ್ವಾಭಿಮಾನಿ ಕರ್ನಾಟಕ, ಬೆಂಗಳೂರು ಇವರ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಮತ್ತು ಡಾ. ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಹಾಗೂ ‘ಗಂಗೆ ಬಾರೆ ಗೌರಿ ಬಾರೆ’ ಕೃತಿಗೆ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ‘ಅಮ್ಮ’ ಪ್ರಶಸ್ತಿ ಲಭಿಸಿವೆ. 2024ನೇ ಸಾಲಿನ ತುಮಕೂರು ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಡಾl ಮಿರ್ಜಾ ಬಷೀರ್‌ ಅವರನ್ನು ಗೌರವಿಸಲಾಗಿದೆ.

ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ನೀಡಲಾಗುವ ʼಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿʼಯು ಹತ್ತು ಸಾವಿರ ನಗದು ಮತ್ತು ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿಗೆ 32 ಕೃತಿಗಳು ಬಂದಿದ್ದು, ಹಿರಿಯ ಸಾಹಿತಿ ಡಾl ಕೆ. ಷರೀಫಾ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಡಾl ಮುಸ್ತಾಫ ಕೆ. ಹೆಚ್. ಹಾಗೂ ಸಾಹಿತಿ ಅಬ್ದುಲ್‌ ರಹಿಮಾನ್‌ ಕುತ್ತೆತ್ತೂರು ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಡಿಸೆಂಬರ್‌ ಕೊನೆಯಲ್ಲಿ ತುಮಕೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಸ್ಲಿಮ್‌ ಲೇಖಕರ ಸಂಘದ ಅಧ್ಯಕ್ಷ ಉಮರ್‌ ಯು.ಹೆಚ್.‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments