ಡಿ. 13-15 : ಮಂಗಳೂರಿನಲ್ಲಿ  ರಾಜ್ಯಮಟ್ಟದ ವಕೀಲರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ

Spread the love

ಡಿ. 13-15 : ಮಂಗಳೂರಿನಲ್ಲಿ  ರಾಜ್ಯಮಟ್ಟದ ವಕೀಲರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ

ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯ ಹಕ್ಕೋತ್ತಾಯದ ಹಿನ್ನೆಲೆ ಮಂಗಳೂರು ವಕೀಲರ ಸಂಘದ ವತಿಯಿಂದ ಡಿ.13ರಿಂದ 15ರವರೆಗೆ ನಗರದಲ್ಲಿ ರಾಜ್ಯಮಟ್ಟದ ವಕೀಲರ ಕ್ರಿಕೆಟ್ ಹಾಗೂ ತ್ರೋಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್.ವಿ. ಹೇಳಿದರು.

ನಗರದ ನ್ಯಾಯಾಲಯದ ವಕೀಲರ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂದು ಈಗಾಗಲೇ ಹೋರಾಟ ನಡೆಯುತ್ತಿದ್ದು, ಹೈಕೋರ್ಟ್ ಪೀಠ ಚಳವಳಿಯನ್ನು ಪ್ರಧಾನವಾಗಿಟ್ಟುಕೊಂಡು ವಕೀಲರಿಗೆ ಈ ಬಗ್ಗೆ ಅರಿವು ಹಾಗೂ ಸಹಕಾರ ಕೋರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಿಂದ ವಕೀಲರ ತಂಡವನ್ನು ಆಹ್ವಾನಿಸಲಾಗಿದೆ. ಕ್ರಿಕೆಟ್ ಪಂದ್ಯಾಟಕ್ಕೆ 36ತಂಡ, ತ್ರೋಬಾಲ್‌ಗೆ 10 ತಂಡಗಳು ಭಾಗವಹಿಸುತ್ತಿವೆ. ನಗರದ ನೆಹರೂ ಮೈದಾನ, ಪಣಂಬೂರು ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದೆ. ಡಿ.13ರಂದು ಬೆಳಗ್ಗೆ 8ಕ್ಕೆ ನೆಹರೂ ಮೈದಾನದಲ್ಲಿ ಹಿರಿಯ ವಕೀಲ ಟಿ.ಎನ್. ಪೂಜಾರಿ, ಎಂ.ವಿ. ಶಂಕರ ಭಟ್, ಬಿ. ಇಬ್ರಾಹಿಂ ಪಂದ್ಯಾಟ ಉದ್ಘಾಟಿಸುವರು. ಡಿ.14ರಂದು ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ. ಖಾದರ್, ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳುವರು. ಡಿ.15ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶ ರಾಜ್ಯಪಾಲ ನ್ಯಾ. ಎಸ್. ಅಬ್ದುಲ್ ನಜೀರ್, ಹೈಕೋರ್ಟ್ ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್, ವಿಶ್ವಜಿತ್ ಶೆಟ್ಟಿ, ಸಿ.ಎಂ. ಜೋಷಿ ಸಹಿತ ಗಣ್ಯರು ಭಾಗವಹಿಸುವರು. ರಾತ್ರಿ 8.30ಕ್ಕೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲಾ ವ್ಯಾಪ್ತಿಗೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ವಿಷಯ ಪ್ರಸ್ತಾಪ ಮಾಡುವಂತೆ ಶಾಸಕರಿಗೆ ಮನವಿ ಮಾಡಿದ್ದೇವೆ. ಹೈಕೋರ್ಟ್ ಪೀಠಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು. ಈ ಬಗ್ಗೆ ಡಿ.18ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಅವರನ್ನು ವಕೀಲರ ಸಂಘದ ನಿಯೋಗ ಭೇಟಿ ಮಾಡಿ ಮನವಿ ನೀಡಲಿದೆ. ಎಲ್ಲ ಮೂಲಸೌಕರ್ಯ ಹೊಂದಿರುವ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೊಂಡರೆ ಈ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದರು. ಈ ಸಂದರ್ಭ ಕ್ರಿಕೆಟ್ ಪಂದ್ಯಾಟ ಸಂಚಾಲಕರಾದ ಅಶೋಕ್ ಅರಿಗ, ಎನ್.ಎನ್. ಹೆಗ್ಡೆ, ಹಣಕಾಸು ಸಮಿತಿ ಮುಖ್ಯಸ್ಥ ಬಿ. ಜಿನೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್., ಉಪಾಧ್ಯಕ್ಷ ಸುಜಿತ್‌ಕುಮಾರ್, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಸುವರ್ಣ, ಜಗದೀಶ ಶೇಣವ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments