ಡಿ. 30: ಮೀನು ಮಾರಾಟ ಫೆಡರೇಶನ್ ವತಿಯಿಂದ ಮಲ್ಪೆಯ್ಲಲಿ ಬೃಹತ್ ಮತ್ಸ್ಯ ಮೇಳ
ಉಡುಪಿ: ಮೀನುಗಾರಿಕೆಗೆ ಹಾಗೂ ಮೀನು ಸೇವನೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ (ನಿ.) ಮಂಗಳೂರು ವತಿಯಿಂದ ಮಲ್ಪೆಯ ಕಡಲ ತೀರದಲ್ಲಿ ಡಿಸೆಂಬರ್ 30ರಂದು ಬೃಹತ್ ಮತ್ಸ್ಯ ಮೇಳ ಫಿಶ್ ಫೆಸ್ಟ್ -2018 ಆಯೋಜಿಸಲಾಗಿದೆ ಎಂದು ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು.
ಈ ಕುರಿತು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಮತ್ಸ್ಯ ಪ್ರೀಯರು ಭಾಗವಹಿಸುವ ನಿರೀಕ್ಷೆಯಿದ್ದು, ಮೀನುಗಾರಿಕೆಯ ಅಭಿವೃದ್ಧಿಯೊಂದಿಗೆ ರಾಜ್ಯದಾದ್ಯಂತ ಮುಂಬರುವ ದಿನಗಳಲ್ಲಿ ಫೆಡರೇಶನ್ ವತಿಯಿಂದ ಮತ್ಸ್ಯ ಕ್ಯಾಂಟಿನ್ ಆರಂಭಿಸಿ ತಾಜಾ ಮೀನಿನ ಖಾದ್ಯಗಳನ್ನು ಮತ್ಸ್ಯ ಪ್ರೀಯರಿಗೆ ಒದಗಿಸುವ ಯೋಜನೆಯಿದ್ದು ಈ ಯೋಜನೆಗೆ ಪೂರ್ವಭಾವಿಯೆಂಬಂತೆ ಈ ಮತ್ಶ್ಯ ಮೇಳವನ್ನು ಆಯೋಜಿಸಲಾಗಿದೆ ಎಂದರು.
ಈ ಬೃಹತ್ ಮತ್ಶ್ಯ ಮೇಳದಲ್ಲಿ ಮತ್ಸ್ಯ ಪ್ರೀಯರಿಗಾಗಿ ತಾಜಾ ಮೀನಿನ ವೈವಿದ್ಯಮಯ ಖಾದ್ಯಗಳ ಕೌಂಟರ್, ಸಾರ್ವಜನಿಕರಿಗಾಗಿ ಈಜುಸ್ಪರ್ಧೆ ಸಹಿತ ಜಲಕ್ರೀಡೆಗಳು, ಸಾಂಪ್ರದಾಯಿಕ ಕೈರಂಪಣಿ ಮೀನುಗಾರಿಕೆ, ಪುರಷರ ಬೀಚ್ ವಾಲಿಬಾಲ್, ಮಹಿಳೆಯರ ಬೀಚ್ ಥ್ರೋ ಬಾಲ್, ಪುರಷ ಹಾಗೂ ಮಹಿಳಾ ತಂಡಗಳ ಬೀಚ್ ಕಬಡ್ಡಿ ಮತ್ತು ಹಗ್ಗ ಜಗ್ಗಾಟ, ಮರಳು ಶಿಲ್ಪ ರಚನೆ ಸ್ಪರ್ಧೆ, ಚಿತ್ರ ಬಿಡುವು ಸ್ಪರ್ಧೆಗಳನ್ನು ಆಯೋಜಿಸಿದ್ದು, ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಲಾಗುವುದು. ಶ್ವಾನ ಪ್ರದರ್ಶನ, ಗಾಳಿಪಟ ಪ್ರದರ್ಶನ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನವನ್ನು ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮೀನುಗಾರರ ಪ್ರಮುಖ ಬೇಡಿಕೆಗಳಾದ 60 ವರ್ಷ ಮೇಲ್ಪಟ್ಟ ಮೀನುಗಾರರಿಗೆ ಪಿಂಚಣಿ ಸೌಲಭ್ಯ, ಶೂನ್ಯ ಬಡ್ಡಿದರದ ಸಾಲ ಯೋಜನೆ, ಮೀನುಗಾರರಿಗೆ ದೋಣಿಗಳ ಸೀಮೆಎಣ್ಣೆ ಪ್ರಮಾಣದ ಹೆಚ್ಚಳ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಹಾಗೂ ಮೀನುಗಾರಿಕೆಗೆ ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದಲ್ಲಿ ಮೀನುಗಾರಿಕೆಯ ಅಭಿವೃದ್ಧಿಯ ಅವಕಾಶಗಳ ಬಗ್ಗೆ ವಿಚಾರ ಸಂಕೀರಣ ಆಯೋಜಿಸಿದ್ದು ಈ ಬಗ್ಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮೀನುಗಾರಿಕೆ ಹಾಗೂ ಮತ್ಸ್ಯೋದ್ಯಮದ ಅಭಿವೃದ್ಧಿಯೊಂದಿಗೆ ಜಿಲ್ಲೆಯ ಪ್ರವಾಸೋದ್ಯಮ, ಕ್ರೀಡಾ ಚುಟುವಟಿಕೆಗಳಿಗೆ ಪ್ರೋತ್ಸಾಹ ಹಾಗೂ ಸಾರ್ವಜನಿಕರಿಗೆ ಮನೋರಂಜನೆಯನ್ನು ಉಣಬಡಿಸುವ ಆಶಯದೊಂದಿಗೆ ಆಯೋಜಿಸಿರುವ ರಾಜ್ಯಮಟ್ಟದ ಮತ್ಸ್ಯ ಮೇಳದಲ್ಲಿ ಹೆಚ್ಚಿನ ಸಂಖ್ಯೆಯ ಮತ್ಸ್ಯ ಪ್ರೀಯರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮವನ್ನು ರಾಜ್ಯ ಮೀನುಗಾರಿಕೆ, ಪಶು ಸಂಗೋಪನೆ ಸಚಿವರಾದ ವೆಂಕಟರಾವ್ ನಾಡಗೌಡ ಉದ್ಘಾಟಿಸಲಿದ್ದು, ಫೆಡರೇಶನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ, ಸಂಸದರಾದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ ಶಾಸಕರಾದ ವಿ ಸುನೀಲ್ ಕುಮಾರ್, ಲಾಲಾಜಿ ಆರ್ ಮೆಂಡನ್, ರಘುಪತಿ ಭಟ್, ಸಿ ಟಿ ರವಿ, ಕೋಟ ಶ್ರೀನಿವಾಸ ಪೂಜಾರಿ, ಬಿ ಎಂ ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆ್ಟಿ, ಎಸ್ ಎಲ್ ಭೋಜೆ ಗೌಡ ಹಾಗೂ ವಿವಿಧ ಮೀನುಗಾರಿಕ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಫೆಡರೇಶನ್ ನಿರ್ದೇಶಕರಾದ ಸುರೇಶ್ ಸಾಲಿಯಾನ್, ನಿತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.