ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರಕಾರ ಪಣ: ಯಶ್ಪಾಲ್ ಸುವರ್ಣ 

Spread the love

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರಕಾರ ಪಣ: ಯಶ್ಪಾಲ್ ಸುವರ್ಣ 

ಉಡುಪಿ: ಕರ್ನಾಟಕ ರಾಜ್ಯವನ್ನು ಡ್ರಗ್ಸ್ ಮುಕ್ತವಾಗಿಸಲು ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ಪಣತೊಟ್ಟಿದೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ರಾಜ್ಯದಲ್ಲಿ ಭದ್ರವಾಗಿ ನೆಲೆಯೂರಿದ್ದ ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಉನ್ನತ ಮಟ್ಟದ ತನಿಖೆ ನಡೆಸಿ ಚಿತ್ರೋದ್ಯಮದ ನಟ ನಟಿಯರು, ಉದ್ಯಮಿಗಳು, ಡ್ರಗ್ ಪೆಡ್ಲರ್ಗಳನ್ನು ಬಂಧಿಸುವ ಮೂಲಕ ದಂಧೆಕೋರರಲ್ಲಿ ನಡುಕ ಹುಟ್ಟಿಸಿದೆ.

ರಾಜ್ಯದ ಕರಾವಳಿ ಭಾಗಗಳಾದ ಭಟ್ಕಳ, ಕಾಸರಗೋಡು ಭಾಗಗಳಲ್ಲಿಯೂ ಡ್ರಗ್ಸ್ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದು ಕೆಲವು ಮತಾಂಧ ಸಂಘಟನೆಗಳು ಅಮಾಯಕ ಯುವಕರನ್ನು ಆಮಿಷಕ್ಕೊಳಪಡಿಸಿ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಲು ಪ್ರೇರೇಪಿಸುತ್ತಿದೆ.

ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಪುತ್ರ ಬೆಲ್ಜಿಯಂ ದೇಶದಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾದ ಸಂದರ್ಭದಲ್ಲೂ ಡ್ರಗ್ಸ್ ಸೇವನೆ ಬಗ್ಗೆ ಸಂಶಯ ವ್ಯಕ್ತವಾದಾಗ ಯಾವುದೇ ತನಿಖೆ ನಡೆಸದೇ ಮುಚ್ಚಿಹಾಕುವ ಮೂಲಕ ಪರೋಕ್ಷವಾಗಿ ಡ್ರಗ್ಸ್ ಮಾಫಿಯಾಕ್ಕೆ ಶರಣಾಗಿತ್ತು.

ದೇಶ ವಿರೋಧಿ, ಅಪರಾಧ ಚಟುವಟಿಕೆಗಳಿಗೆ ಪ್ರೇರೇಪಿಸುವ ಡ್ರಗ್ಸ್ ಜಾಲದ ವಿರುದ್ಧ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ರವರು ಹಾಗೂ ಜಿಲ್ಲೆಯ ಎಲ್ಲಾ ಸಂಸದರು, ಶಾಸಕರು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲು ಆದೇಶ ನೀಡಿದ್ದಾರೆ.

ಶಿಕ್ಷಣ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಮುಖ ವಹಿಸಿರುವ ರಾಜ್ಯದ ಕರಾವಳಿ ಜಿಲ್ಲೆಗಳ ವಿದ್ಯಾರ್ಥಿಗಳು, ಯುವ ಜನತೆಯನ್ನು ಹಾದಿ ತಪ್ಪಿಸುವ ಡ್ರಗ್ಸ್ ಜಾಲವನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆ ಕರಾವಳಿ ಜಿಲ್ಲೆಗಳಿಗೂ ತನಿಖೆಯನ್ನು ವಿಸ್ತರಿಸಿ ಡ್ರಗ್ಸ್ ಮುಕ್ತವಾಗಿಸುವಂತೆ ಮನವಿ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love