ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು : ಶಾಸಕ ಡಾ. ಭರತ್ ಶೆಟ್ಟಿ
ಉಡುಪಿ: ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಸಮಾಜಕ್ಕೆ ಬದ್ಧತೆ ಮತ್ತು ಆಸಕ್ತಿಯೂ ಬೇಕು. ಕೇವಲ ಪೊಲೀಸರಿಂದ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗುವುದಿಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಅವರು ಶನಿವಾರ ಇಲ್ಲಿನ ಟೈಗರ್ ಸರ್ಕಲ್ನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವವತಿಯಿಂದ ಡ್ರಗ್ಸ್ ಮುಕ್ತ ಉಡುಪಿ ಅಭಿಯಾನದಲ್ಲಿ ಬೀದಿ ನಾಟಕ ಮತ್ತು ಬೀದಿ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲೆಡೆ ಕೋವಿಡ್-19 ಸೋಂಕು ವ್ಯಾಪಿಸುವಾಗ ನಾವು ಎಲ್ಲರಿಗೂ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡಲು ಕೇಳಿಕೊಳ್ಳುತ್ತಿದ್ದರೆ, ಯಾವಸುಳಿವೂ ಇಲ್ಲದೇ ಬಹಳ ದೊಡ್ಡ ಸಂಖ್ಯೆಯಲ್ಲಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಮಾಹಿತಿ ಗುಪ್ತಚರ ಇಲಾಖೆಯಿಂದ ಸಿಕ್ಕಿದೆ. ಯುವಕರು ಖಿನ್ನತೆಯಿಂದ ಒತ್ತಡವನ್ನು ನಿರ್ವಹಿಸಲು, ಕುತೂಹಲದಿಂದ ಮಾದಕ ವಸ್ತುಗಳನ್ನು ಬಳಸುತ್ತಾರೆ. ಇದು ಮುಂದೆ ಕ್ರಿಮಿನಲ್ ಚಟುವಟಿಕೆಗಳತ್ತ ವಾಲುತ್ತದೆ.
ಡ್ರಗ್ಸ್ ಜಾಲವನ್ನು ಬುಡಸಮೇತ ಕಿತ್ತುಹಾಕಲು ಸಮಾಜದ ಸಹಕಾರ ಮುಖ್ಯ – ಶಾಸಕ ಡಾ.ವೈ ಭರತ್ ಶೆಟ್ಟಿಪ್ರಧಾನಿ ನರೇಂದ್ರ ಮೋದಿಯವರು ಡ್ರಗ್ಸ್ ಜಾಲವನ್ನು ದೇಶದಿಂದಲೇ ಕಿತ್ತು ಹಾಕಲು ಸಂಕಲ್ಪಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಆದರೆ ಸರಕಾರ ಮತ್ತು ಪೊಲೀಸ್ ಇಲಾಖೆಯಿಂದ ಮಾತ್ರ ಈ ಕೆಲಸ ಆಗುವಂತದ್ದಲ್ಲ. ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದವರು ಮಾಡುತ್ತಿರುವ ಈ ಅಭಿಯಾನದಲ್ಲಿ ಸಮಾಜ, ಶಿಕ್ಷಕರು, ಮಕ್ಕಳ ಪೋಷಕರು ಕೂಡ ಸಹಕರಿಸಿದರೆ ಡ್ರಗ್ಸ್ ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯ ಎಂದರು.
ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ, ಕಾರ್ಯದರ್ಶಿ ಅಕ್ಷಿತ್ ಶೆಟ್ಟಿ ಹೆರ್ಗ, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗೆ ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಯಶಪಾಲ ಸುವರ್ಣ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಪಕ್ಷದ ಪ್ರಮುಖರಾದ ಶರತ್ ಶೆಟ್ಟಿ, ರವೀಂದ್ರ ಮಡಿವಾಳ, ವೀಣಾ ಶೆಟ್ಟಿ ಶೀಲಾ ಕೆ. ಶೆಟ್ಟಿ ಗೀತಾಂಜಲಿ ಸುವರ್ಣ, ಶ್ವೇತಾ ಪೂಜಾರಿ, ನಯನಾ ಗಣೇಶ್ ಮೊದಲಾದವರಿದ್ದರು.