ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯನ್ನು ಅಪಹರಿಸಿ ಸೊತ್ತುಗಳನ್ನು ಸುಲಿಗೆ ಮಾಡಿದ ವಂಚಕರು
ಉಡುಪಿ : ಕಾರಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿ ಸೊತ್ತುಗಳನ್ನು ಸುಲಿಗೆ ಮಾಡಿರುವ ಬಗ್ಗೆ ವರದಿಯಾಗಿದೆ.
ನಿಟ್ಟೂರು ಅಡ್ಕದಕಟ್ಟೆಯ ಸುರೇಂದ್ರ ಡಿ.ಕುಂದರ್(37) ಎಂಬವರು ತನ್ನ ಹೆಂಡತಿ ಮನೆಯಾದ ನೇಜಾರಿಗೆ ಹೋಗಲು ನಿಟ್ಟೂರು ಬಾಳಿಗಾ ಫಿಶ್ ನೆಟ್ ಬಳಿ ಸಂತೆಕಟ್ಟೆ ಕಡೆ ಹೋಗಲು ಸಂಜೆ 7:30ರ ಸುಮಾರಿಗೆ ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಬಂದವರು ಗೋವಾ ಹಾಗೂ ಕುಂದಾಪುರಕ್ಕೆ ಎಷ್ಟು ಕಿ.ಮೀ. ಇದೆ ಎಂದು ವಿಚಾರಿಸಿ, ನಂತರ ಸುರೇಂದ್ರ ಕುಂದರ್ ಅವರನ್ನು ಸಂತೆಕಟ್ಟೆಯಲ್ಲಿ ಬಿಡುವುದಾಗಿ ಕಾರಿಗೆ ಹತ್ತಿಸಿಕೊಂಡರು.
ಸಂತೆಕಟ್ಟೆಯಲ್ಲಿ ಕಾರನ್ನು ನಿಲ್ಲಿಸದೆ, ಅದರಲ್ಲಿದ್ದ 4 ಜನ ಅಪರಿಚಿತ ವ್ಯಕ್ತಿಗಳು ಸುರೇಂದ್ರ ಕುಂದರ್ ಗೆ ಹಲ್ಲೆ ನಡೆಸಿ ಕುತ್ತಿಗೆಯಲ್ಲಿದ್ದ 30ಸಾವಿರ ರೂ. ಮೌಲ್ಯದ ಸುಮಾರು 13 ಗ್ರಾಂ ತೂಕದ ಚಿನ್ನದ ಸರ, 3,000ರೂ. ನಗದು, ಮೊಬೈಲ್‌ನ್ನು ಕಿತ್ತುಕೊಂಡರೆನ್ನಲಾಗಿದೆ. ಬಳಿಕ ಕಾರು ಸಾಸ್ತಾನ ಟೋಲ್ ಗೇಟ್‌ಗಿಂತ ಮೊದಲು ಒಳ ರಸ್ತೆಯಲ್ಲಿ ಹೋಯಿತು. ರಾತ್ರಿ 8ಗಂಟೆ ಸುಮಾರಿಗೆ ಸುರೇಂದ್ರರನ್ನು ಕಾರಿನಿಂದ ದೂಡಿ ಹಾಕಿದ ದುಷ್ಕರ್ಮಿಗಳು ಕಾರನ್ನು ಚಲಾಯಿಸಿಕೊಂಡು ಪರಾರಿಯಾದರೆಂದು ದೂರಲಾಗಿದೆ.
ಇದರಿಂದ ತೀವ್ರವಾಗಿ ಗಾಯಗೊಂಡ ಸುರೇಂದ್ರ ಕುಂದರ್ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.