ತಂತ್ರಜ್ಞಾನವನ್ನು ಬಳಸಿ, ಆಧುನಿಕತೆಗೆ ಒಗ್ಗಿಕೊಳ್ಳಿ : ಪ್ರೊ. ಸುಶೀಲಾ ಆರ್. ರೈ
ಮೂಡುಬಿದಿರೆ : `ಆಧುನಿಕ ತಂತ್ರಜ್ಞಾನ ಇಂದಿನ ದಿನದ ಅವಶ್ಯಕತೆ. ತಂತ್ರಜ್ಞಾನವನ್ನು ಬಳಸಿ, ಆಧುನಿಕತೆಗೆ ಒಗ್ಗಿಕೊಳ್ಳಿ; ಆದರೆ ವಾಸ್ತವ ಲೋಕದಲ್ಲಿ ಬದುಕಿ. ಶ್ರದ್ಧೆಯಿಂದ ನಿಮ್ಮ ಕಾರ್ಯ ನಿರ್ವಹಿಸಿ. ಪರಿಶ್ರಮವೆಂಬುದು ಪರಿಶುದ್ಧ ಮುತ್ತಿನಂತೆ. ಅದಕ್ಕೆ ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಈ ಶ್ರದ್ಧೆ, ಪರಿಶ್ರಮ, ತನ್ಮಯತೆಗಳೇ ಯಶಸ್ವೀ ಸಾಧನೆಯ ಮೂಲ ತಳಹದಿ’ ಎಂದು ಪ್ರೊ. ಸುಶೀಲಾ ಆರ್. ರೈ ಹೇಳಿದರು.
ಆಳ್ವಾಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯೆಯೆಂದರೆ ಕೇವಲ ಅಕ್ಷರಾಭ್ಯಾಸವಲ್ಲ. ಒಬ್ಬ ವ್ಯಕ್ತಿ ತನ್ನೆಲ್ಲಾ ಜವಾಬ್ದಾರಿಗಳನ್ನು, ಒತ್ತಡಗಳನ್ನು ಸರಿಯಾಗಿ ನಿಭಾಯಿಸಬೇಕು; ತನ್ನ ಸಾಧನೆಗಳನ್ನು, ಗುಣ-ನಡತೆಗಳನ್ನು ಸಮದೂಗಿಸಿಕೊಂಡು ಹೋಗಬೇಕು. ಅಂತಹ ಸಾಮಥ್ರ್ಯವೇ ಆ ವ್ಯಕ್ತಿ ವಿದ್ಯಾವಂತನೆಂದು ಸಾರಿ ಹೇಳುತ್ತದೆ. ಆದರೆ ಉನ್ನತೆ ಸಾಧನೆಗಳು ಎಂದಿಗೂ ಮನುಷ್ಯನನ್ನು ಅಹಂಕಾರಿಯಾಗಿಸಬಾರದು ಎಂದು ಕಿವಿ ಮಾತು ಹೇಳಿದರು. ವಾರ್ಷಿಕೋತ್ಸವದಲ್ಲಿ ನಡೆದ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಕುರಿತಾಗಿ ಅಭಿಪ್ರಾಯಗಳನ್ನು ಹಂಚಿಕೊಂಡ ಅವರು `ಈ ಸನ್ಮಾನ ಕಾರ್ಯಕ್ರಮ ಮಂಗಳೂರು ವಿವಿಯ ಘಟಿಕೋತ್ಸವ ಕಾರ್ಯಕ್ರಮವನ್ನು ನೆನಪಿಸುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಯಾವ ವಿಶ್ವವಿದ್ಯಾನಿಲಯಕ್ಕೂ ಕಡಿಮೆಯಿಲ್ಲ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, `ವಿದ್ಯಾರ್ಥಿ ಶಕ್ತಿ ಬಗ್ಗೆ ನನಗೆ ಅಪಾರ ಗೌರವವಿದೆ. ಒಬ್ಬ ವಿದ್ಯಾರ್ಥಿಯಲ್ಲಿ ಎಷ್ಟೆಲ್ಲಾ ಶಕ್ತಿ ಸಾಮಥ್ರ್ಯಗಳಿರಬಹುದು ಎಂಬುದಕ್ಕೆ ಈ ವೇದಿಕೆಯಲ್ಲಿರುವ ವಿದ್ಯಾರ್ಥಿ ಸಾಧಕರೇ ಸಾಕ್ಷಿ. ಈ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ ಅವರನ್ನು ನಾಡಿಗೆ ಕೊಡುಗೆಯಾಗಿ ನೀಡಬೇಕೆಂಬುದು ನಮ್ಮ ಆಸೆ. ಮಂಗಳೂರು ವಿವಿಯ ಅಡಿಯಲ್ಲಿರುವ ಆಳ್ವಾಸ್ ಕಾಲೇಜಿನ ಸಾಧನೆ ಅಪರೂಪವಾದದ್ದು. ಶೈಕ್ಷಣಿಕ, ಸಾಂಸ್ಕøತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ನಮಗೆ ಆರ್ಥಿಕ ನಷ್ಟ ಆಗಿದ್ದರೂ ಕಾಲೇಜು ಆರಂಭಿಸಿದ ನಮ್ಮ ಉದ್ದೇಶ ಮಾತ್ರ ಸಾರ್ಥಕ್ಯ ಕಂಡಿದೆ’ ಎಂದು ಹೇಳಿದರು.
ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಕಾಲೇಜಿನ ಕ್ರೀಡಾ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, `ಶೈಕ್ಷಣಿಕ ಕ್ಷೇತ್ರದಲ್ಲಿ ರ್ಯಾಂಕ್ ಪಡೆಯುವುದು ಸುಲಭ. ಆದರೆ ಒಂದು ಕ್ರೀಡಾಕೂಟದಲ್ಲಿ ಚಿನ್ನ ಗೆಲ್ಲುವುದು, ದಾಖಲೆ ಸೃಷ್ಟಿಸುವುದು ಸುಲಭದ ಮಾತಲ್ಲ. ಆದರೆ ನಮ್ಮ ವಿದ್ಯಾರ್ಥಿಗಳು ಇದನ್ನು ಸಾಧ್ಯವಾಗಿಸಿದ್ದಾರೆ. ಈ ಕಾಲೇಜನ್ನು ಆರಂಭಿಸಿದ ಹೊಸತರಲ್ಲಿ ನಮ್ಮ ವಿದ್ಯಾರ್ಥಿಗಳು ಒಲಂಪಿಕ್ಸ್‍ನಲ್ಲಿ ಭಾಗವಹಿಸಬೇಕೆಂಬ ಆಸೆಯನ್ನು ನಾನು ವ್ಯಕ್ತಪಡಿಸಿದಾಗ ಬಹಳಷ್ಟು ಜನ ನನ್ನನ್ನು ಗೇಲಿ ಮಾಡಿದ್ದರು. ಆದರೆ ಈ ಬಾರಿ ನಮ್ಮ ಕಾಲೇಜಿನ ವಿದ್ಯಾರ್ಥಿ ದಾರುಣ್ ಒಲಂಪಿಕ್ಸ್‍ನಲ್ಲಿ ಇಡೀ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ವಿಷಯ’ ಎಂದರು.
ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳಿ, ಚಿಕ್ಕ ಚಿಕ್ಕ ವಿಷಯಗಳಿಗೂ ಪ್ರಾಮುಖ್ಯತೆ ನೀಡಿ ಆಗ ಮಾತ್ರ ದೊಡ್ಡ ಸಾಧನೆ ಸಾಧಿಸಬಹುದು. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ. ಎಷ್ಟು ಹಣ ವಿನಿಯೋಗಿಸಿಯಾದರೂ ಸರಿ ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿ ನಾಡಿಗೆ ಕೊಡುಗೆಯಾಗಿ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಾಂಶುಪಾಲ ಡಾ. ಕುರಿಯನ್ ಕಾಲೇಜಿನ ವಾರ್ಷಿಕ ವರದಿ ನೀಡಿದರು. ರಚನಾ ಸ್ವಾಗತಿಸಿದರು. ವಂದನಾ ವಂದಿಸಿದರು. ರಕ್ಷಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿ ಸನ್ಮಾನ
ವಿದ್ಯಾರ್ಥಿ ಸನ್ಮಾನ ಕಾರ್ಯಕ್ರಮ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ರ್ಯಾಂಕ್ ಪಡೆದ 52 ವಿದ್ಯಾರ್ಥಿಗಳನ್ನು, ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಸ್ಥಾನ ಗಳಿಸಿದ ಕ್ರೀಡಾ ಪಟುಗಳನ್ನು ಹಾಗೂ ಸಾಂಸ್ಕøತಿಕ ರಂಗದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಸಾಂಸ್ಕøತಿಕ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಪುರಸ್ಕರಿಸಲಾಯಿತು.