ತಂದೆ ತಾಯಿಯವರನ್ನು ಕಳೆದುಕೊಂಡ ಮಕ್ಕಳ ದತ್ತು ಸ್ವೀಕಾರಕ್ಕೆ ಆಳ್ವಾಸ್ ನಿರ್ಧಾರ
ಮೂಡುಬಿದಿರೆ: ಮೈಸೂರಿನ ಸುಳ್ವಾಡಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಪ್ರಸಾದದಲ್ಲಿ ವಿಷ ಪ್ರಾಶಣ ಸೇವಿಸಿ ಕೃಷ್ಣ ನಾಯ್ಕ್-ಮೈಲಿಬಾಯಿ ದಂಪತಿ ಸಾವನ್ನಪ್ಪಿದ್ದು, ಅವರ ಮೂವರು ಮಕ್ಕಳನ್ನು ದತ್ತು ಸ್ವೀಕರಿಸಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಿರ್ಧರಿಸಿದೆ. ಮಕ್ಕಳ ಅಭಿಪ್ರಾಯ ಪಡೆದು ಮುಂದಿನ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ತಿಳಿಸಿದ್ದಾರೆ.
ಮಂಗಳವಾರ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮೂವರು ಮಕ್ಕಳು ಹಾಗೂ ಅವರ ಸಂಬಂಧಿಕರನ್ನು ಭೇಟಿ ಮಾಡಿ, ಅವರಿಗೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು, ವಿದ್ಯಾಭ್ಯಾಸದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ದಂಪತಿಯ ಹಿರಿಯ ಮಗಳು ರಾಣಿಬಾಯಿ ಅವರ ಬಿಎಸ್ಸಿ , ಎರಡನೇ ಮಗಳು ಪ್ರಿಯಾಬಾಯಿ ಅವರ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಹಾಗೂ ಮಗ ರಾಜೇಶ್ ನಾಯ್ಕ್ನ ಪಿಯುಸಿ ವ್ಯಾಸಂಗವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಮುಂದುವರಿಸುವುದಾದರೆ ಅವರಿಗೆ ಪದವಿ, ಸ್ನಾತಕೋತ್ತರ ಶಿಕ್ಷಣ ಪಡೆಯಲು ಉಚಿತ ವ್ಯವಸ್ಥೆ ಕಲ್ಪಿಸಲಾಗುವುದು.
ಹಾಸ್ಟೆಲ್ನಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅವರಿಗೆ ಸಂಪೂರ್ಣವಾಗಿ ಉಚಿತವಾಗಿ ಕೊಡುತ್ತೇವೆ. ಅವರ ವ್ಯಾಸಂಗದ ಬಳಿಕ ಅವರಿಗೆ ಉದ್ಯೋಗ ಕಲ್ಪಿಸುವ ಜವಾಬ್ದಾರಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಿಭಾಯಿಸುತ್ತದೆ ಎಂದು ಡಾ.ಎಂ ಮೋಹನ ಆಳ್ವ ಮಾಧ್ಯಮದವರಿಗೆ ತಿಳಿಸಿದ್ದಾರೆ.