ತಂಬಾಕು ಸೇವನೆ, ಹೃದ್ರೋಗಕ್ಕೆ ಪ್ರಚೋದನೆ
ಮಂಗಳೂರು : ಪ್ರಪಂಚದಲ್ಲಿ ಇತರೆ ಖಾಯಿಲೆಗಳಿಗಿಂತ ಹೃದ್ರೋಗದಿಂದ ಸಾವನ್ನಪ್ಪುವವರ ಸಂಖ್ಯೆ ಅತಿ ಹೆಚ್ಚು. ಇದರಲ್ಲಿ ಶೇ. 12 ರಷ್ಟು ಸಾವುಗಳು ತಂಬಾಕು ಸೇವನೆಯಿಂದಾಗುತ್ತದೆ. ಇಷ್ಟೇ ಅಲ್ಲದೆ ಹೃದ್ರೋಗಕ್ಕೆ ಮೊದಲ ಮುಖ್ಯ ಕಾರಣ ರಕ್ತದೊತ್ತಡವಾದರೆ, ಎರಡನೇ ಮುಖ್ಯ ಕಾರಣ ತಂಬಾಕು ಸೇವನೆಯಾಗಿರುತ್ತದೆ. ವಿಪರ್ಯಾಸವೆಂದರೆ ಬಹತೇಕ ಜನರಿಗೆ ತಂಬಾಕು ಸೇವನೆ ಹೃದ್ರೋಗಕ್ಕೆ ಕಾರಣವಾಗುತ್ತದೆ ಎಂಬುವ ಸತ್ಯ ತಿಳಿದಿಲ್ಲ. ಈ ಮಾಹಿತಿಯ ಕೊರತೆಗೆ ಹಲವಾರು ಕಾರಣಗಳಿರಬಹುದು. ಉದಾಹರಣೆಗೆ ಬಹಳ ವರ್ಷಗಳಿಂದ ತಂಬಾಕು ಕ್ಯಾನ್ಸರಿಗೆ ಕಾರಣ ಎಂಬ ಮಾಹಿತಿಯನ್ನು ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಚುರ ಪಡಿಸಲಾಗಿದೆಯೇ ಹೊರತು ಹೃದ್ರೋಗ ಮತ್ತು ತಂಬಾಕು ಸೇವನೆಯ ಸಂಬಂಧ ಮಾಹಿತಿ ಪ್ರಚಾರ ಈವರೆಗೆ ನೀಡಿರುವುದು ವಿರಳ. ಇದನ್ನು ಮನಗಂಡು, ವಿಶ್ವ ಆರೋಗ್ಯ ಸಂಸ್ಥೆಯು, 31 ಮೇ, 2018 ರಂದು ವಿಶ್ವ ತಂಬಾಕು ರಹಿತ ದಿನಾಚರಣೆ 2018 ನೇ ಸಾಲಿನ ಘೋಷಣೆ “ತಂಬಾಕು ಮತ್ತು ಹೃದ್ರೋಗ” ಮಾಡಲಾಗಿದೆ.
ಈ ಸಾಲಿನ ವಿಶ್ವ ತಂಬಾಕು ರಹಿತ ದಿನಾಚರಣೆಯ ಉದ್ದೇಶಗಳೇನೆಂದರೆ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಪರೋಕ್ಷ ಧೂಮಪಾನ ಮತ್ತು ಹೃದ್ರೋಗಗಳ ನಡುವಿನ ಸಂಬಂಧದ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಸಾರ್ವಜನಿಕರು ಮತ್ತು ಸರ್ಕಾರಿ ಸಂಸ್ಥೆಗಳು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ನಿರ್ಣಾಮ ಮಾಡಲು ಅವಕಾಶಗಳನ್ನು ಕಲ್ಪಿಸುವುದು.
ತಂಬಾಕು ಸೇವನೆ ಹೃದ್ರೋಗಕ್ಕೆ ಹೇಗೆ ಕಾರಣ? ಧೂಮಪಾನ ಅಥವಾ ತಂಬಾಕು ಜಗುಯುವುದರಿಂದ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ. ತಂಬಾಕಿನಲ್ಲಿರುವ ನಿಕೋಟಿನ್ ಎಂಬ ವ್ಯಸನಾತ್ಮಕ ಪದಾರ್ಥ ರಕ್ತದೊತ್ತಡ ಹೆಚ್ಚಿಸುತ್ತದೆ, ಕಾರ್ಬನ್ ಮೊನಾಕ್ಸೈಡ್ ಹೃದಯ ಬಡಿತವನ್ನು ಹೆಚಿಸುತ್ತದೆ ಮತ್ತು ರಕ್ತದಲ್ಲಿನ ಆಮ್ಲಜನಕ ಸರಬರಾಜು ಕುಂಠಿತಗೊಳ್ಳುತ್ತದೆ. ದೇಹದಲ್ಲಿ ಅಪಾಯಕಾರಿ ಕೊಲೆಸ್ಟಿರಾಲ್ ಹೆಚ್ಚಲಿದ್ದು, ಇದರಿಂದ ರಕ್ತನಾಳಗಳ ಒಳಭಾಗವು ಸಪೂರಗೊಳ್ಳುತ್ತದೆ. ಅದಲ್ಲದೆ, ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗುವುದರಿಂದ ಹಲವಾರು ರೀತಿಯ ಹೃದ್ರೋಗಗಳು, ಪಾಶ್ರ್ವವಾಯು, ಹೃದಯಾಘಾತ ಮತ್ತು ಅಕಾಲಿಕ ಮರಣ ಉಂಟಾಗುತ್ತದೆ.
ಪರೋಕ್ಷ ಧೂಮಪಾನ ಮತ್ತು ಹೃದ್ರೋಗ: ಪರೋಕ್ಷ ಧೂಮಪಾನವೂ ಸಹ ನೇರ ಧೂಮಪಾನದಷ್ಟೇ ಅಪಾಯಕಾರಿ. ಏಕೆಂದರೆ ಇದರಲ್ಲೂ ಸಹ ತಂಬಾಕು ಹೊಗೆ ತುಂಬಿರುತ್ತದೆ. ಪರೋಕ್ಷ ಧೂಮಪಾನದಿಂದ ರಕ್ತವು ಜಿಗುಟಾಗುತ್ತದೆ. ಮನೆ ಅಥವಾ ಕಛೇರಿಗಳಲ್ಲಿ ಪರೋಕ್ಷ ಧೂಮಪಾನ ಮಾಡುವವರಲ್ಲಿ ಹೃದ್ರೋಗ ಉಂಟಾಗುವ ಸಾಧ್ಯತೆ ಶೇ. 25-30 ರಷ್ಟು ಹೆಚ್ಚುತ್ತದೆ. ಆದ್ದರಿಂದ ಪರೋಕ್ಷ ಧೂಮಪಾನವನ್ನು ತಡೆಯುವುದು ಅತ್ಯಗತ್ಯ.
ತಂಬಾಕು ಸೇವನೆಯ ದುಷ್ಪರಿಣಾಮಗಳ ಸತ್ಯ ಸಂಗತಿಗಳು: ತಂಬಾಕು ಸೇವನೆಯಿಂದ ವಿಶ್ವದಲ್ಲಿ ಸುಮಾರು 70 ಲಕ್ಷ ಜನ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ 10 ಲಕ್ಷ ಭಾರತೀಯರಾಗಿರುತ್ತಾರೆ. ಭಾರತದಲ್ಲಿ ಪ್ರತಿ 8 ಸೆಕೆಂಡ್ಗೆ ಒಂದು ತಂಬಾಕು ಸಂಬಂಧಿ ಸಾವು ಸಂಭವಿಸುತ್ತದೆ. ಪ್ರತಿ ಸಿಗರೇಟಿಗೆ ಲಘು-ಹೃದಯಾಘಾತವಾಗುವ ಸಾಧ್ಯತೆ ಶೇ. 5.6 ರಷ್ಟು ಹೆಚ್ಚಾಗುತ್ತದೆ. ಜಗಿಯುವ ತಂಬಾಕು ಹೃದಯಾಘಾತವಾಗುವ ಸಾಧ್ಯತೆಯನ್ನು ಎರಡುಪಟ್ಟು ಹೆಚ್ಚಿಸುತ್ತದೆ. 35-69 ವಯಸ್ಸಿನವರಲ್ಲಿ 2011 ನೇ ಸಾಲಿನಲ್ಲಿ ತಂಬಾಕು ಸೇವನೆಯಿಂದಾಗಿರುವ ಸಂಪೂರ್ಣ ಆರ್ಥಿಕ ವೆಚ್ಚ ರೂ. 1,04,500 ಕೋಟಿ. ಇದರಲ್ಲಿ ರೂ. 16,800 ಕೋಟಿ ಚಿಕಿತ್ಸಾ ವೆಚ್ಚವಾಗಿದ್ದು, ರೂ. 3,600 ಕೋಟಿ ಕೇವಲ ಹೃದ್ರೋಗ ಸಂಬಂಧಿ ಖಾಯಿಲೆಗಳಿಗೆ ಸೀಮಿತವಾಗಿದೆ.
ಹೃದ್ರೋಗ ತಡೆಯಲು ತಂಬಾಕು ತ್ಯಜಿಸುವುದು ಎಷ್ಟು ಅನಿವಾರ್ಯ? ಸಂಶೋಧನೆಗಳ ಪ್ರಕಾರ ದಿನಕ್ಕೆ ಕೇವಲ ಒಂದು ಸಿಗರೇಟ್ ಪಾನ ಮಾಡಿದರೂ ಹೃದ್ರೋಗ ಉಂಟಾಗುವ ಅಪಾಯ ಹೆಚ್ಚಾಗುತ್ತದೆ. ಇದನ್ನು ತಡೆಯಲು ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸುವುದೊಂದೇ ಉಪಾಯ ವಿನಃ ಸಂಖ್ಯೆ ಕಡಿಮೆ ಮಾಡುವುದಲ್ಲ. ತಂಬಾಕು ತ್ಯಜಿಸಿದರೆ ಹೃದಯದ ಆರೋಗ್ಯ ಹೇಗೆ ವೃದ್ಧಿಯಾಗುತ್ತದೆ? ತಂಬಾಕು ಸೇವನೆ ಎಷ್ಟು ಅಪಾಯಕಾರಿಯೊ, ಇದನ್ನು ತ್ಯಜಿಸುವುದು ಅಷ್ಟೇ ಸಹಾಯಕಾರಿ. ತಂಬಾಕು ಸೇವನೆ ತ್ಯಜಿಸಿದ ಕಲವೇ ನಿಮಿಷಗಳಲ್ಲಿ ದೇಹದಲ್ಲಿ ಸದ್ಬೆಳವಣಿಗೆಗಳು ಕಂಡು ಬರುತ್ತದೆ. 20 ನಿಮಿಷ: ರಕ್ತದೊತ್ತಡ ಸಾಧಾರಣ ಮಟ್ಟವಾಗುತ್ತದೆ. 12 ಘಂಟೆ: ದೇಹದಲ್ಲಿ ಆಮ್ಲಜನಿಕ ಸರಬರಾಜು ಹೆಚ್ಚುತ್ತದೆ ಮತ್ತು ಕಾರ್ಬನ್ ಮೊನಾಕ್ಸೈಡ್ ಮಟ್ಟ ಕ್ಷೀಣಿಸುತ್ತದೆ.
2 ವಾರ- 3 ತಿಂಗಳು: ಹೃದಾಯಾಘಾತದ ಅಪಾಯ ಕಡಿಮೆಯಾಗಲು ಪ್ರಾರಂಭ 1 ವರ್ಷ: ಹೃದಾಯಾಘಾತ ಮತ್ತು ಪಾಶ್ರ್ವವಾಯು ಸಂಭವಿಸುವ ಅಪಾಯ ಶೇ. 50 ರಷ್ಟು ಇಳಿಕೆ, 5- 15 ವರ್ಷ: ಹೃದ್ರೋಗ ಮತ್ತು ಪಾಶ್ರ್ವವಾಯು ಸಂಭವಿಸುವ ಅಪಾಯ ಶೂನ್ಯಕ್ಕೆ ಇಳಿತ (ತಂಬಾಕು ಸೇವನೆ ಮಾಡದವರಂತೆ ಆಗುವುದು)
ತಂಬಾಕು ನಿಯಂತ್ರಣ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯ ರೂಪರೇಷೆಗಳೇನು? ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಸೇವನೆ ತ್ಯಜಿಸಲು ತಂಬಾಕು ಮುಕ್ತ ಕೇಂದ್ರಗಳ ಸ್ಥಾಪನೆ, ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಅರಿವಿನ ಕಾರ್ಯಕ್ರಮಗಳು ತಂಬಾಕು ಜಾಹಿರಾತು ಮತ್ತು ಉತ್ತೇಜನದ ನಿಷೇಧ, ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆ ಹೆಚ್ಚಳ.
ದಕ್ಷಿಣ ಕನ್ನಡ ಜಿಲ್ಲೆಯ ತಂಬಾಕು ನಿಯಂತ್ರಣ ಕಾರ್ಯಕ್ರಮಗಳು: ತರಬೇತಿ ಕಾರ್ಯಕ್ರಮ: ಇಲಾಖೆಯಲ್ಲಿನ ವೈದ್ಯಾಧಿಕಾರಿಗಳಿಗೆ, ಆರೋಗ್ಯ ಸಹಾಯಕರಿಗೆ,ಪದವಿ ಪೂರ್ವ ಹಾಗೂ ಪ್ರೌಢ ಶಾಲಾ ಮುಖ್ಯೋಪಾಧ್ಯಾರಿಗೆ, ಸರಕಾರಿ ದಂತ ವೈದ್ಯಾಧಿಕಾರಿಗಳಿಗೆ ಮತ್ತು ಆಶಾ ಕಾರ್ಯಕರ್ತರಿಗೆ ತಂಬಾಕು ನಿಯಂತ್ರಣದ ಬಗ್ಗೆ ತರಬೇತಿ ನೀಡಲಾಗಿದೆ.
ಜಾಗೃತಿ ಕಾರ್ಯಕ್ರಮ: ವಿವಿಧ ಇಲಾಖೆಯ ಗುಮಾಸ್ತರಿಗೆ, ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ, ಮಂಗಳೂರು ನಗರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಐ.ಇ.ಸಿ ಚಟುವಟಿಕೆಗಳು: ಟಿವಿ ಚಾನಲ್ನಲ್ಲಿ ಸ್ಕ್ರೋಲಿಂಗ್, ಮೊಡಲ್ ಮೇಕಿಂಗ್ ಸ್ಪರ್ಧೆ, ಕಿರುಚಿತ್ರ ಸ್ಪರ್ಧೆ, ಬೀದಿ ನಾಟಕ, ರೇಡಿಯೋ ಕಾರ್ಯಕ್ರಮಗಳು ಇತ್ಯಾದಿ ಮಾಧ್ಯಮಗಳ ಮೂಲಕ ಜಿಲ್ಲೆಯಾದ್ಯಂತ ಅರಿವಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಂಬಾಕು ವ್ಯಸನ ಮುಕ್ತ ಕೇಂದ್ರ: ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲಿನ್ಲ ತಂಬಾಕು ವ್ಯಸನ ಮುಕ್ತ ಕೇಂದ್ರದ ಮೂಲಕ ಉಚಿತವಾಗಿ ಆಪ್ತಸಮಾಲೋಚನೆ ಮತ್ತು ನಿಕೋಟಿನ್ ರಿಪ್ಲೇಸ್ಮೆಂಟ್ ಥೆರಪಿ ನೀಡಲಾಗುತ್ತಿದೆ. ಕ್ಷಯ ರೋಗಿಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ.
ಕೋಟ್ಪಾ ಕಾಯ್ದೆ ಅನುಷ್ಠಾನ ಕಾರ್ಯಾಚರಣೆ: ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಕೋಟ್ಪಾ 2003 ಕಾಯ್ದೆಯಡಿಯಲ್ಲಿ ಉಲ್ಲಂಘನೆಗಳನ್ನು ಗುರುತಿಸಿ ದಂಡ ವಿಧಿಸಲಾಗುತ್ತಿದೆ.