ತತ್ವ ಸಿದ್ಧಾಂತ, ವಿಚಾರ ವಿಸ್ತರಿಸುವುದು ಆರ್.ಎಸ್.ಎಸ್. ಉದ್ದೇಶ – ನಳಿನ್ ಕುಮಾರ್ ಕಟೀಲ್
ಉಡುಪಿ: ರಾಜಕೀಯ ಮಾಡುವುದು ಮತ್ತು ಆಡಳಿತ ನಡೆಸುವುದು ಮಾತ್ರ ಬಿಜೆಪಿಯ ಉದ್ದೇಶವಲ್ಲ. ಭಾರತವನ್ನು ಪರಿವರ್ತನೆ ಮಾಡಿ ವಿಶ್ವಗುರುವನ್ನಾಗಿಸುವುದೇ ಬಿಜೆಪಿಯ ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾದ ಅಭಿನಂದನಾ ಸಮಾರಂಭ ದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತಿದ್ದರು.
ಅಧಿಕಾರ ಹಿಡಿಯುವುದಕ್ಕಿಂತ ರಾಷ್ಟ್ರ ಪರಿವರ್ತನೆ, ಸ್ವಾಮಿ ವಿವೇಕಾನಂದರು ಕಂಡ ಭವ್ಯ ಭಾರತದ ಕನಸು ನನಸು ಮಾಡುವುದು ಸಂಘ ಪರಿವಾರದ ಗುರಿ. ಬಿಜೆಪಿಯಿಂದ ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನಿಯಾಗುವುದೇ ಗುರಿಯಲ್ಲ. ಸಂಘ ಪರಿವಾರದ ಚಿಂತನೆ, ತತ್ವ ಸಿದ್ಧಾಂತ, ವಿಚಾರ ವಿಸ್ತಾರವಾಗಬೇಕೆನ್ನುವುದೇ ಮುಖ್ಯ ಧ್ಯೇಯ. ಜ್ಞಾನ ಸಂಪತ್ತು ನೀಡಿದ ಭಾರತದ ಮಾತಿಗೆ ಜಗತ್ತೇ ತಲೆದೂಗುತ್ತಿದೆ ಎಂದು ವ್ಯಾಖ್ಯಾನಿಸಿದರು.
ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನದ ಹೋರಾಟಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿ ಬಿತ್ತಿದ ಕನಸು ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದು ಮೂಲಕ ನನಸಾಗಿದೆ ಎಂದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಪಕ್ಷಕ್ಕಿಂತ ದೇಶ ಮುಖ್ಯ ಎಂಬ ವಿಚಾರಧಾರೆ ಬಿಜೆಪಿಯದ್ದು. ಆ ವಿಚಾರ ಧಾರೆಯಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ಪ್ರಜಾಪ್ರಭುತ್ವ ನೆಲೆಯಲ್ಲಿ ಅಧ್ಯಕ್ಷರುಗಳ ಆಯ್ಕೆ ನಡೆಸಲಾಗುತ್ತಿದೆ. ಸಾಮಾನ್ಯ ಕಾರ್ಯಕರ್ತ ಕೂಡ ಉನ್ನತ ಸ್ಥಾನ ಪಡೆಯಲು ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ಹಾಗಾಗಿ ಇಂದಿಗೂ ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ ಎಂದರು.
ಭಯ ಮತ್ತು ಎಚ್ಚರಿಕೆಯೊಂದಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿ ದ್ದೇನೆ. ಮೂರು ವರ್ಷಗಳ ನಂತರ ಎದುರಾಗುವ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಗೆ 150 ಸ್ಥಾನಗಳಲ್ಲಿ ಗೆಲುವು ತಂದು ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷ ಕಟ್ಟುವ ಕಾರ್ಯ ಮಾಡಲಾಗುವುದು ಎಂದು ಅವರು ತಿಳಿಸಿದರು.
ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಮುಖಂಡರಾದ ಉದಯ ಕುಮಾರ್ ಶೆಟ್ಟಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಸಂಧ್ಯಾ ರಮೇಶ್, ನೀತಾ ಗುರುರಾಜ್ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಕುತ್ಯಾರ್ ನವೀನ್ ಶೆಟ್ಟಿ ಸ್ವಾಗತಿಸಿದರು. ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.