ತಬ್ಲೀಗ್ ಆಸ್ತಿ ಮುಟ್ಟುಗೋಲು ಹಾಕಿ – ಸರಕಾರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹ
ಚಿಕ್ಕಮಗಳೂರು: ಕೊರೋನಾದಿಂದ ಮೃತಪಟ್ಟವರ ಎಲ್ಲಾ ಕೇಸುಗಳ ಆರೋಪವನ್ನು ತಬ್ಲಿಗ್ ಮೇಲೆ ಹಾಕಬೇಕು ಮತ್ತು ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡು, ಅವರ ಚಿಕಿತ್ಸೆಗೆ ಖರ್ಚಾಗಿರುವ ವೆಚ್ಚವನ್ನು ಭರಿಸಿಕೊಳ್ಳಬೇಕು ಎಂದು ಸರ್ಕಾರವನ್ನುಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ‘ನಿಜಾಮುದ್ದೀನ್ನಲ್ಲಿ ತಬ್ಲಿಗ್ ಜಮಾತ್ನಲ್ಲಿ ಕೆಲವರು ಭಾಗವಹಿಸಿ ಬಂದ ನಂತರ ರಾಜ್ಯದ ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿಯಲ್ಲಿ 70 ಮಂದಿ ತಬ್ಲಿಗ್ ಜಮಾತ್ಗೆ ಹೋಗಿದ್ದರು. ಅವರನ್ನು ಒತ್ತಾಯ ಪೂರ್ವಕವಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಅನುಚಿತವಾಗಿ ವರ್ತನೆ ಮಾಡಿದರು. ತಬ್ಲಿಗ್ ಜಮಾತ್ನಲ್ಲಿ ಭಾಗವಹಿಸಿದ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ’ ಎಂದರು.
‘ಇದೊಂದು ರೀತಿಯ ‘ಜಿಹಾದ್’, ಷಡ್ಯಂತ್ರ. ಕೊರೊನಾದಿಂದ ಮೃತಪಟ್ಟವರ ಎಲ್ಲ ಕೇಸುಗಳ ಆರೋಪವನ್ನು ತಬ್ಲಿಗ್ ಮೇಲೆ ಹಾಕಬೇಕು. ಅವರ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಂಡು, ಅವರ ಚಿಕಿತ್ಸೆಗೆ ಖರ್ಚಾಗಿರುವ ವೆಚ್ಚವನ್ನು ಭರಿಸಿಕೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆ. ತಬ್ಲಿಗ್ಗಳಿಗೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ಕೇಂದ್ರ ಮತ್ತು ರಾಜ್ಯ ಸರ್ಕಾರ ವರದಿ ತರಿಸಿಕೊಳ್ಳುತ್ತಿದೆ. ಮೈಸೂರಿನಲ್ಲಿ ನೋಟುಗಳು ಬಿದ್ದಿರುವುದು ಉದ್ದೇಶ ಪೂರ್ವಕವಾಗಿ ಕೆಲ ದೇಶದ್ರೋಹಿಗಳು ಮಾಡುತ್ತಿರುವ ಕೆಲಸ. ಇದೂ ಒಂದು ರೀತಿಯ ಭಯೋತ್ಪಾದನೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರು.