ತಾಕತ್ತಿದ್ದರೆ ಕಟೀಲು ದೇವಸ್ಥಾನಕ್ಕೆ ಬಂದು ಆಣೆ ಮಾಡಿ: ಮೇಯರ್ ಕವಿತಾ ಸವಾಲು
ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಕವಿತಾ ಅವರಿರುವ ಬಿಜೈಯ ಅಪಾರ್ಟ್ಮೆಂಟ್ನಲ್ಲಿ ದೀಪಾವಳಿ ಸಂದರ್ಭ ಪಟಾಕಿ ವಿಚಾರದಲ್ಲಿ ಮಕ್ಕಳ ನಡುವೆ ಉಂಟಾದ ಜಗಳಕ್ಕೆ ರಾಜಕೀಯ ಬಣ್ಣ ಬಂದಿದ್ದು, ಮೇಯರ್ ತಮ್ಮ ಫ್ಲ್ಯಾಟ್ನ ಸೆಕ್ಯುರಿಟಿ ಗಾರ್ಡ್ ಮಗುವಿನ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದ ಘಟನೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ತಾಕತ್ತಿದ್ದರೆ ದೇವಸ್ಥಾನಕ್ಕೆ ಬಂದು ಆಣೆ ಮಾಡುವಂತೆ ವಿರೋಧ ಪಕ್ಷಕ್ಕೆ ಸವಾಲು ಹಾಕಿದರು. ಕಟೀಲು ದುರ್ಗಾ ಪರಮೇಶ್ವರಿ ಮೇಲೆ ಆಣೆ ಇಟ್ಟು ಕಣ್ಣೀರು ಹಾಕಿದ ಘಟನೆಯೂ ನಡೆಯಿತು.
ತನ್ನನ್ನು ಮೇಯರ್ ಆಗಿ ನೋಡದೆ ಓರ್ವ ತಾಯಿಯಾಗಿ ನೋಡಬೇಕು ಎಂದು ಮನವಿ ಮಾಡಿಕೊಂಡ ಮೇಯರ್, ಫ್ಲ್ಯಾಟ್ನ ಸಿಸಿ ಟಿವಿ ಫೂಟೇಜ್ ಪರಿಶೀಲಿಸಬೇಕು. ಯಾರ ಮೇಲೂ ತಾನು ಹಲ್ಲೆ ಮಾಡಿಲ್ಲ ಎಂದು ನಿರಂತರವಾಗಿ ಪ್ರತಿಕ್ರಿಯಿಸುತ್ತಾ ಕಣ್ಣೀರು ಹಾಕಿದರು.
ಕೆಲವರು ಕೈ-ಕೈ ಮಿಲಾಯಿಸಲು ಮುಂದಾದರು. ಆದರೆ ಬಿಜೆಪಿ ಸದಸ್ಯರು ಮೇಯರ್ ಮುಂದೆ ಧಿಕ್ಕಾರ ಕೂಗುತ್ತ ರಾಜಿನಾಮೆಗೆ ಒತ್ತಾಯಿಸಿದರು. ಮೇಯರ್ ಕವಿತಾ ಸನಿಲ್ ತನ್ನ ಬಿಜೈನಲ್ಲಿರುವ ಫ್ಲಾಟ್ ನಲ್ಲಿ ವಾಚ್ ಮ್ಯಾನ್ ಪತ್ನಿಗೆ ಹಲ್ಲೆ ನಡೆಸಿದ್ದಾರೆಂಬ ವಿಚಾರ ಭಾರೀ ಸುದ್ದಿಯಾಗಿತ್ತು. ಬಳಿಕ ಮೇಯರ್ ತನ್ನ ಪ್ರಭಾವ ಬಳಸಿ ಬಡಪಾಯಿ ವಾಚ್ ಮ್ಯಾನ್ ಪತ್ನಿಯ ವಿರುದ್ಧ ಕೊಲೆಯತ್ನ ದೂರು ದಾಖಲಿಸಿದ್ದರು.
ಈ ವಿಚಾರ ವಿವಾದಕ್ಕೆ ತಿರುಗಿದ್ದು ಬಿಜೆಪಿ ಸದಸ್ಯರು ಸಭೆಯಲ್ಲಿ ರಂಪ ನಡೆಸಿದ್ದಾರೆ. ಕೊನೆಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮೇಯರ್ ಕವಿತಾ ಸನಿಲ್ ಕಣ್ಣೀರು ಹಾಕಿದ್ರು. ತಾನು ಬಡ ಮಹಿಳೆಗೆ ಹಲ್ಲೆ ನಡೆಸಿಲ್ಲ. ಬೇಕಾದ್ರೆ ಕಟೀಲು ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡ್ತೀನಿ. ಬಿಜೆಪಿಯವರೂ ಬರಲಿ ಅಂತಾ ಸವಾಲು ಹಾಕಿದರು.