ತಾಕತ್ತಿದ್ದರೆ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಿಸಲಿ; ರಿಝ್ವಾನ್ ಅರ್ಶದ್ ಸವಾಲು

Spread the love

ತಾಕತ್ತಿದ್ದರೆ ಸಚಿವ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಿಸಲಿ; ರಿಝ್ವಾನ್ ಅರ್ಶದ್ ಸವಾಲು

ಉಡುಪಿ: ಸಂವಿಧಾನ ಬದಲಾವಣೆ ಮಾಡಬೇಕೆಂದು ಹೇಳುತ್ತಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗ್ಡೆಯವರು ತಾಕತ್ತಿದ್ದರೆ ಸಂವಿಧಾನವನ್ನು ಬದಲಾವಣೆ ಮಾಡಿ ತೊರೀಸಲಿ ಬಳಿಕ ನಾವು ಸೆಕ್ಯುಲರ್ ಜನ ಏನೆಂದು ತೋರಿಸುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ರಿಝ್ವಾನ್ ಅರ್ಶದ್ ಸವಾಲೊಡ್ಡಿದ್ದಾರೆ.

ಅವರು ಮಂಗಳವಾರ ಕಾಪುವಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಜಿಲ್ಲಾ ಸಮಾವೇಶ ಯುವ ಚೈತನ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸದಾ ಜನರಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವ ಸಚಿವ ಅನಂತ ಕುಮಾರ್ ಹೆಗ್ಡೆ ಮಾತನಾಡುವ ಭಾಷೆಯಿಂದ ಜನರಲ್ಲಿ ಅಂತರ ಸೃಷ್ಟಿಯಾಗಿದೆ. ಪ್ರಸ್ತುತ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ ಸಚಿವರಿಗೆ ಕೇಂದ್ರದಲ್ಲಿ ಅವರದ್ದೆ ಬಹುಮತ ಇರುವ ಸರಕಾರವಿದ್ದು ತಾಕತ್ತಿದ್ದರೆ ಸಂವಿಧಾನವನ್ನು ಬದಲಿಸಿ ತೋರಿಸಲಿ ಎಂದರು.

ಸುಳ್ಳಿನ ಸರದಾರ ದೇಶದ ಪ್ರಧಾನಿ ಮೋದಿಯವರು ಸ್ವಾರ್ಥಕ್ಕಾಗಿ ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಮತ್ತು ಕೇಂದ್ರ ಸಚಿವ ಅನಂತ್ ಕುಂಆರ್ ಹೆಗ್ಡೆಯವರು ಧರ್ಮಗಳ ನಡುವೆ ವಿಷಬೀಜ ಬಿತ್ತಿ ಪರಸ್ಪರ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಮಾತನಾಡುವ ಕೀಳು ಮಟ್ಟದ ಭಾಷೆ ಕಾಂಗ್ರೆಸಿಗೆ ಬರುವುದಿಲ್ಲ. ಸಿದ್ದರಾಮಯ್ಯ ನೇತ್ರತ್ವದ ಸರಕಾರ ಕಳೆದ 4 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತಿ ಶುದ್ಧ ಆಡಳಿತವನ್ನು ನೀಡಿದ್ದು ಕರಾವಳಿಯಲ್ಲಿ ಹಾಗೂ ರಾಜ್ಯದಲ್ಲಿ ಹಿಂದೆಂದೂ ಕಾಣದ ಅಭಿವೃದ್ದಿಯನ್ನು ಕಂಡಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ ಜನ ಮರಳು ಮಾಡಿ ಭಾವನಾತ್ಮಕ ವಿಚಾರ ಮುಂದಿಟ್ಟು ಭಯ ಆತಂಕದ ಕೆಟ್ಟ ವಾತಾವರಣ ನಿರ್ಮಾಣ ಮಾಡಿದ ಬಿಜೆಪಿ ಭಾರತಕ್ಕೆ ವಿಶ್ವದಲ್ಲಿರುವ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಕಳೆದ ನಾಲ್ಕುವರೆ ವರ್ಷಗಳಿಂದ ಕಾಂಗ್ರೆಸ್ ಸರಕಾರ ಮಾಡಿರುವ ಸಾಧನೆ ಮತ್ತು ಕೇಂದ್ರ ಸರ್ಕಾರದ ಸುಳ್ಳುಗಳನ್ನು ಜನರಿಗೆ ತಿಳಿಸಲು ಬಹಿರಂಗ ಚರ್ಚೆಗೆ ಬರುವಂತೆ ಬಿಜೆಪಿಗೆ ಸವಾಲೆಸೆದರು.

ಸಮಾವೇಶವನ್ನು ಉದ್ಘಾಟಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತವರ ನೇತೃತ್ವದ ಬಿಜೆಪಿಗರ ಸುಳ್ಳು ಆಶ್ವಾಸನೆಗಳಿಂದ ಜನಸಾಮಾನ್ಯರು ವಂಚನೆಗೊಳಗಾಗುತ್ತಿದ್ದು, ಜನಸಾಮಾನ್ಯರನ್ನು ಈ ವಂಚನೆಯಿಂದ ಪಾರು ಮಾಡುವ ಮಹತ್ವದ ಜವಾಬ್ದಾರಿ ಯುವ ಕಾಂಗ್ರೆಸಿಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ನಾಯಕರ ಮೇಲೆ ಹಗರಣಗಳ ಆರೋಪ ಹೊರಿಸಿದ್ದ ಬಿಜೆಪಿಗೆ ಜೈಲಿಗೆ ಹಾಕುವ ತಾಕತ್ತು ಏಕೆ ಬಂದಿಲ್ಲ ಎಂದು ಪ್ರಶ್ನಿಸಿದರು.

ಕಾಪು ಶಾಸಕ ವಿನಯ್ ಕುಮಾರ್ ಸೊರಕೆ, ಸಚಿವರಾದ ಯು.ಟಿ.ಖಾದರ್, ಮಾಜಿ ಶಾಸಕ ಗೋಪಾಲ ಭಂಢಾರಿ, ಮುಖಂಡರಾದ ಶಾಫಿ ಪರಂಬಲ್, ಶ್ರೀನಿವಾಸ್, ಜಭೀ ಮಾಥರ್, ಸುಹೇಲ್ ಕಂದಕ್, ಉಮೇಶ್ ಬೋರೆಗೌಡ, ಜನಾರ್ದನ ತೋನ್ಸೆ, ಎಂ ಎ ಗಫೂರ್, ಜಿ ಎ ಬಾವಾ, ಹಬೀಬ್ ಆಲಿ, ರಾಕೇಶ್ ಮಲ್ಲಿ, ಮಿಥುನ್ ರೈ, ಇತರರು ಉಪಸ್ಥಿತರಿದ್ದರು.

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ ಅಮೀನ್ ಸ್ವಾಗತಿಸಿದರು. ಅಬ್ದುಲ್ ಅಜೀಜ್ ವಂದಿಸಿ ಅಮೃತ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.


Spread the love