ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ

Spread the love

ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾಪೂಜೆ

ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವತಿಯಿಂದ ತುಂಬೆಯಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ನೇತ್ರಾವತಿ ನದಿಗೆ ಗಂಗಾ ಪೂಜೆ ಮಂಗಳವಾರ ನಡೆಯಿತು.

ಗಂಗಾ ಪೂಜೆ ನೆರವೇರಿಸಿದ ಮೇಯರ್ ಮನೋಜ್ ಕುಮಾರ್ ಮಾತನಾಡಿ, ನೇತ್ರಾವತಿ ನದಿಯಿಂದ ಮಂಗಳೂರು ನಗರವಾಸಿಗಳಿಗೆ, ಕೃಷಿಗೆ ಹಾಗೂ ಇನ್ನಿತರ ಪ್ರದೇಶಗಳಿಗೆ ನೀರು ಸರಬರಾಜು ಆಗುತ್ತಿದೆ. ನೀರಿನ ಒಳಹರಿವು ಚೆನ್ನಾಗಿದ್ದು, ಈ ವರ್ಷದಲ್ಲಿಯೂ ಕೂಡ ಅಣೆಕಟ್ಟಿನಲ್ಲಿ 6 ಮೀ ಆಳದವರೆಗೆ ನೀರು ಸಂಗ್ರಹವಾಗಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಕೊರತೆಯಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಲಸಿರಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿಗಳು ಪೂರ್ಣಗೊಂಡರೆ ಶೀಘ್ರದಲ್ಲಿ ಮಂಗಳೂರು ಜನತೆಗೆ ದಿನದ 24 ಗಂಟೆ ನೀರು ಸರಬರಾಜು ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಮಾತನಾಡಿ, ನೀರು ಸೀಮಿತವಾಗಿ ಸಿಗುವ ಸಂಪನ್ಮೂಲವಾಗಿದೆ. ಮುಂದಿನ ಬರುವಂತಹ ಬೇಸಿಗೆ ಕಾಲದಲ್ಲಿ ಹಾಗೂ ನಂತರವೂ ಕೂಡ ಮಹಾನಗರಪಾಲಿಕೆ ಸುವ್ಯವಸ್ಥಿತವಾಗಿ ನಗರದ ಜನತೆಗೆ ಸಕಾಲದಲ್ಲಿ ನೀರು ಪೂರೈಸಲು ಇಂದು ನೇತ್ರಾವತಿ ನದಿಗೆ ಗಂಗಾಪೂಜೆ ಮಾಡಲಾಯಿತು ಹಾಗೂ ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗದಿರಲಿ ಎಂದರು.

ಉಪಮೇಯರ್ ಭಾನುಮತಿ, ವಿಪಕ್ಷ ನಾಯಕ ಅನಿಲ್ ಕುಮಾರ್, ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ತೆರಿಗೆ ಮತ್ತು ಹಣಕಾಸು ತಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ್ ಶೆಟ್ಟಿ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುಮಿತ್ರ, ಪಟ್ಟಣ ಯೋಜನೆ ಮತ್ತು ಸುಧಾರಣಾ ಸಮಿತಿ ಅಧ್ಯಕ್ಷೆ ವೀಣಾ, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಸರಿತಾ, ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ, ಜಯಾನಂದ ಅಂಚನ್, ಭಾಸ್ಕರ್ ಕೆ ಮತ್ತಿತರರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments