ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 11 ನೇ ವರ್ಷದ ಗೌಜಿ ಗಮ್ಮತ್ತ್

Spread the love

ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 11 ನೇ ವರ್ಷದ ಗೌಜಿ ಗಮ್ಮತ್ತ್

ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 11 ನೇ ವರ್ಷದ ಗೌಜಿ ಗಮ್ಮತ್ತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು  ದುಬೈಯ ಝಬೀಲ್ ಪಾರ್ಕ್ನಲ್ಲಿ ಅದ್ದೂರಿಯಾಗಿ ನಡೆಯಿತು.

ತುಳುನಾಡಿನ ಸಂಪ್ರದಾಯದಂತೆ ಭಾಗವಹಿಸಲು ಬಂದಂತಹ ಎಲ್ಲಾ ತುಳು ಭಾಂದವರನ್ನು ಬೆಲ್ಲ ನೀರು ಮತ್ತು ತಾಂಬೂಲ ನೀಡುವುದರ ಮೂಲಕ ಸ್ವಾಗತಿಸಲಾಯಿತು . ಕುಮಾರಿ ಪ್ರಿಶಾ, ಕುಮಾರಿ ಶಾರ್ವಿ ಮಾಸ್ಟರ್ ಸುಹನ್ ರವರು ದೇವರ ಸ್ತುತಿಯೊಂದಿಗೆ ದುಬೈಯ ತುಳು ಕನ್ನಡ ಸಂಘಟನೆಯ ಮುಂದಾಳು ಹಿರಿಯ ಗಣ್ಯರಾದ ಸರ್ವೋತ್ತಮ ಶೆಟ್ಟಿ , ಸಂಸ್ಥೆಯ ಹಿರಿಯ ಸದಸ್ಯರಾದ ಅಜ್ಮಲ್ ದುಬೈ, ನೊವೆಲ್ ಅಲ್ಮೆಡ ಇವರು ತುಳು ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ತಂಡಕ್ಕೆ ಶುಭ ಹಾರೈಸಿದರು. ತದನಂತರ ತುಳುನಾಡ ಗೀತೆಯನ್ನು ಪ್ರಸ್ತುತ ಪಡಿಸಲಾಯಿತು. ಊರಿನಿಂದ ಬಂದ ಹಿರಿಯರಾದ ಶ್ರೀಮತಿ ಸುಶೀಲ ಸಂಜೀವ ಪೂಜಾರಿ ಮತ್ತು ಶ್ರೀಮತಿ ಸುಲೋಚನಾ ಜಯ ಅಮಿನ್ ಇವರುಗಳು ಭೂಲೋಕದ ಕಲ್ಪವೃಕ್ಷ ತೆಂಗಿನ ಗಿಡವನ್ನು ನೆಡುವ ಮುಖೇನ ತುಳುನಾಡಿನ ಆಟಗಳಿಗೆ ಚಾಲನೆ ನೀಡಿದರು.

ಮದ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹರೀಶ್ ಬಂಗೇರ, ಡೋನಿ ಕೊರೆಯ, ಜಯಂತ್ ಶೆಟ್ಟಿ , ಮನೋಹರ್ ಹೆಗಡೆ, ಶೋದನ್ ಪ್ರಸಾದ್, ಸುದರ್ಶನ್ ಹೆಗಡೆ, ಸತೀಶ್ ಪೂಜಾರಿ, ಜೋಸೆಫ್ ಮಥಯಿಸ್ ಹಾಗೂ ಸಂಸ್ಥೆಯ ಹಿರಿಯ ಸದಸ್ಯರಾದ ಸತೀಶ್ ಉಳ್ಳಾಲ್,ಸಂದೀಪ್ ಕೊಟ್ಯಾನ್, ಅಧ್ಯಕ್ಷರಾದ ಪ್ರೇಮ್ ಜೀತ್ ರವರು ಉಪಸ್ಥಿತರಿದ್ದರು, ದುಬೈಯ ಹಿರಿಯ ವ್ಯಕ್ತಿ ಸಮಾಜ ಸೇವಕರಾದ ಮಾಧವ ಹೆಜಮಾಡಿ ಕೋಡಿ ಇವರನ್ನು ಇವರನ್ನು ಸನ್ಮಾನಿಸಿ ” ಅಪ್ಪೆ ಭಾಷೆ ತುಳುವ ತುಡರ್” ಎಂಬ ಬಿರುದನ್ನು ನೀಡಿ ಗೌವಿಸಲಾಯಿತು.

ದುಬೈಯ ತುಳು ಕನ್ನಡ ಸಂಘಟನೆಗಳಲ್ಲಿ ಉತ್ತಮ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಶಮೀರ್ ಬೋಳಾರ, ತುಳು ಯೂಟ್ಯೂಬ್ ಚಾನಲ್ ಮುಖಾಂತರ ತುಳುನಾಡ ಸಂಸ್ಕೃತಿಯನ್ನು ಪಸರಿಸುವ ಶ್ರೀಮತಿ ಸುನೀತಾ ಸಂದೀಪ್ ದೇವಾಡಿಗ ಹಾಗೂ ಬಾಕ್ಸಿಂಗ್ ಕ್ರೀಡ ಪಟು ಸಚಿನ್ ಪೂಜಾರಿ,ಸಮಾಜ ಸೇವಕ ಮಾಧವ ಪೂಜಾರಿ ಇವರನ್ನು ಶಾಲು ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಊರಿನ ಅಶಕ್ತ ಚಿಕ್ಕ ಮಗುವಿನ ವೈದ್ಯಕೀಯ ಖರ್ಚಿಗಾಗಿ ಸಹಾಯ ನಿಧಿ ಯನ್ನು ಸಮರ್ಪಿಸಲಾಯಿತು.

ದುಬೈಯ ತುಳುವರನ್ನು ಬೆದ್ರ, ಕಾರ್ಲ, ಕಾಸ್ರೋಡು, ಬಾರಕೂರ್ ಎಂಬ ಹೆಸರಿನ ನಾಲ್ಕು ತಂಡಗಳಾಗಿ ವಿಂಗಡಿಸಿ ತುಳುನಾಡಿನ ಆಟಗಳಾದ ಕಬಡ್ಡಿ , ಲಗೋರಿ, ಹಗ್ಗ ಜಗ್ಗಾಟ , ಕಾಗದದ ಆಟ, ಸೈಕಲ್ ಚಕ್ರ ಓಡಿಸುವುದು , ತುಳು ಸಂಸ್ಕೃತಿಯ ರಸಪ್ರೆಶ್ನೆ, ಅಡಿಕೆ ಮರದ ಹಾಳೆ ಎಲೆ ಎಳೆಯುವ ಆಟ, ತೆಂಗಿನ ಗರಿಯ ನೇಯುವುದು (ಮಾಡಲ್ ಮೊಡಿಪಿನಿ) ಸ್ಪರ್ಧೆ ವಿಶೇಷವಾಗಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ತರಹದ ಆಟಗಳನ್ನು ಹಮ್ಮಿಕೊಳ್ಳಲಾಗಿತ್ತು ,

ಮದ್ಯಾಹ್ನ ಕಜೆ ಅಕ್ಕಿ ಗಂಜಿ ಹುರುಳಿ ಚಟ್ನಿ, ಕಡಲೆ ಬಲ್ಲ್ಯಾರ್ , ನುಂಗೆಲ್ ನಂಗ್ ಫ್ರೈ, ಕಾಯಿ ಕುಕ್ಕುದ (ಮಾವಿನ ಕಾಯಿ ) ತಲ್ಲಿ ಹಾಗೂ ಕಡಲೆ ಬೇಳೆ ಪಾಯಸವನ್ನು ಊರಿನಿಂದ ತರಿಸಿದ ಅಡಿಕೆಯ ಹಾಳೆಯ ಬಟ್ಟಲಿನಲ್ಲಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.

ತದನಂತರ ಗೆದ್ದ ತಂಡಗಳಿಗೆ ಪ್ರಶಸ್ತಿ ಪತ್ರ , ಪದಕವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಸಹಕರಿಸಿದ ಮಹನೀಯರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು. ನೊವೆಲ್ ಅಲ್ಮೇಡಾ ಮತ್ತು ಅಮರ್ ನಂತೂರ್, ಶೋಭಿತ ಪ್ರೇಮ್ ಜೀತ್ , ಜಯ ಶ್ರೀ ಪ್ರೇಮನಂದ್ , ಲಕ್ಷ್ಮೀ ಪೂಜಾರಿ, ಅಶ್ವಿನಿ ಸತೀಶ್, ಲಿಖಿತ ದೀಪಕ್, ಶ್ವೇತಾ ಸಂದೀಪ್ ರವರು ಆಟೋಟಗಳನ್ನು ನಿರ್ವಹಿಸಿದರು.

500ಕಿಂತಲು ಹೆಚ್ಚಿನ ದುಬೈಯ ಬಂಧು ಬಾಂಧವರು ಅತೀ ಉ್ಸಾಹದಿಂದ ಭಾಗವಹಿಸಿ ಸಂತೋಷ ಪಟ್ಟರು,

ಸಂಸ್ಥೆಯ ಕಾರ್ಯದರ್ಶಿಯವರಾದ ರೀತು ಅಂಚನ್ ಕುಲಶೇಖರ ಸ್ವಾಗತಿಸಿ ಸಂಸ್ಥೆಯ ಸಾಧನೆಯನ್ನು ವಿವರಿಸಿ, ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿ ದನ್ಯವಾದ ಸಮರ್ಪಣೆ ಮಾಡಿದರು. ತುಳು ಪಾತೆರ್ ಗ ತುಳು ಒರಿಪಾಗದ ಅಧ್ಯಕರು ಸರ್ವ ಸದಸ್ಯರು ಉಪಸ್ಥಿತರಿದ್ದು, ಇವರ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.


Spread the love