ತುಳುನಾಡಿನ ಆಚರಣೆಗಳ ಬಗ್ಗೆ ಡಿಕೆ ಶಿವಕುಮಾರ್ ಕಾಳಜಿ ಶ್ಲಾಘನಾರ್ಹ – ರಮೇಶ್ ಕಾಂಚನ್
ಉಡುಪಿ: ಕರಾವಳಿಯ ಅಭಿವೃದ್ಧಿಗೆ ಪ್ರತ್ಯೇಕ ಪ್ರವಾಸ ನೀತಿಯನ್ನು ರೂಪಿಸುವ ಚಿಂತನೆ ಹಾಗೂ ತುಳುನಾಡಿನ ಆಚರಣೆಗಳಾದ ದೈವ ಕೋಲ, ನೇಮೋತ್ಸವ, ಯಕ್ಷಗಾನಗಳನ್ನು ನಡೆಸಲು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕರಾವಳಿ ಜನತೆಯಮೇಲೆ ತೋರಿರುವ ವಿಶೇಷ ಕಾಳಜಿಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್ ಶ್ಲಾಘಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಳೆದ ಭಾನುವಾರದಂದು ಉಡುಪಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಕರಾವಳಿಯಲ್ಲಿ ನಡೆಯುವ ದೈವ ಕೋಲ, ನೇಮೋತ್ಸವ,ಯಕ್ಷಗಾನ ಹಾಗೂ ಕೋಳಿ ಅಂಕದ ವಿಚಾರದಲ್ಲಿ ಜಿಲ್ಲಾಡಳಿತದ ಕಠಿಣ ನಿಯಮದಿಂದ ಸಮಸ್ಯೆ ಉಂಟಾಗುತ್ತಿರುವ ಕುರಿತು ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ಅಂದು ನೀಡಿದ್ದರು. ಅದರಂತೆ ಮಂಗಳವಾರ ವಿಧಾನಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿರುವುದು ಅವರ ಜನಪರ ಕಾಳಜಿಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಪ್ರವಾಸಿ ತಾಣಗಳು, ಉದ್ದಿಮೆ ಹಾಗೂ ಧಾರ್ಮಿಕ ಕೇಂದ್ರಗಳು ರಾಜ್ಯ ಕರಾವಳಿಯ ದ.ಕ ಹಾಗೂ ಉಡುಪಿ ಭಾಗದಲ್ಲಿ ಇದ್ದು. ಬಹುದೊಡ್ಡ ಆರ್ಥಿಕ ಕೇಂದ್ರವಾಗಿಯೂ ಬೆಳೆಯುವ ನಗರಗಳಲ್ಲಿ ಮುಂಚೂಣಿ ಸ್ಥಾನದಲ್ಲಿದೆ, ಆದರೆ ಇತ್ತೀಚಿನ ದಿನಗಳಲ್ಲಿ ಕರಾವಳಿಗೆ ವಿದೇಶಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ವಿದ್ಯಾರ್ಥಿಗಳ ಹಾಗೂ ಉದ್ದಿಮೆದಾರರ ಮತ್ತು ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದ್ದು ಮೂಲಭೂತ ಸೌಕರ್ಯ ಹಾಗೂ ಭದ್ರತೆಯ ಕಾರಣದಿಂದ ಕರಾವಳಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿದ್ದು ಇದರ ಕುರಿತು ಕರಾವಳಿ ಭಾಗದ ಶಾಸಕರು ಸೂಕ್ತವಾಗಿ ಗಮನಿಸಿ, ಒಳ್ಳೆಯ ನಿರ್ಧಾರವನ್ನು ಮಾಡಬೇಕು ಎಂದು ಸೂಚಿಸಿ ಕರಾವಳಿಯ ಅಭಿವೃದ್ಧಿಗೆ ಪ್ರತ್ಯೇಕ ಸಭೆ ನಡೆಸುವ ಭರವಸೆಯನ್ನು ಕೂಡ ನೀಡಿದ್ದಾರೆ. ಇದರೊಂದಿಗೆ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನು ಕೂಡ ರೂಪಿಸುವ ಚಿಂತನೆ ನಡೆಸಿದ್ದಾರೆ.ಈ ಮೂಲಕ ಕರಾವಳಿಯ ಅಭಿವೃದ್ಧಿಗೆ ಉತ್ತಮ ಚಿಂತನೆ ಮಾಡುತ್ತಿರುವ ರಾಜ್ಯದ ಉಪ ಮುಖ್ಯಮಂತ್ರಿಗಳ ನಡೆ ಕರಾವಳಿ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ರಮೇಶ್ ಕಾಂಚನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.