ತೆಂಕನಿಡಿಯೂರಿನಲ್ಲಿ ರಾಧ್ಮಾ ರೆಸಿಡೆನ್ಸಿ ಉದ್ಘಾಟನೆ; ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಸನ್ಮಾನ

Spread the love

ತೆಂಕನಿಡಿಯೂರಿನಲ್ಲಿ ರಾಧ್ಮಾ ರೆಸಿಡೆನ್ಸಿ ಉದ್ಘಾಟನೆ; ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಸನ್ಮಾನ

ಉಡುಪಿ: ತೆಂಕನಿಡಿಯೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಮತ್ತು ವಸತಿ ಸಮುಚ್ಚಯ ರಾಧ್ಮಾ ರೆಸಿಡೆನ್ಸಿಯ ಉದ್ಘಾಟನೆ ಮಂಗಳವಾರ ನಡೆಯಿತು.

ಕಾರ್ಯಕ್ರಮಕ್ಕೆ ಹಾಗೂ ವಿಧಾನಪರಿಷತ್ ಇದರ ನೂತನ ಸಭಾಪತಿಯಾಗಿ ಆಯ್ಕೆಯಾಗಿ ಮೊದಲ ಬಾರಿಗೆ ತೆಂಕನಿಡಿಯೂರಿಗೆ ಆಗಮಿಸಿ ರಾಧ್ಮಾ ರೆಸಿಡೆನ್ಸಿ ಕಟ್ಟಡಕ್ಕೆ ಶುಭಹಾರೈಸಿದ ಪ್ರತಾಪ್ ಚಂದ್ರ ಶೆಟ್ಟಿಯವರನ್ನು ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು ಸನ್ಮಾನಿಸಿದರು.

ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರಾವಳಿಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ವಿಪುಲ ಅವಕಾಶವಿದ್ದು ಸಾಕಷ್ಟು ಉದ್ಯೋಗ ಗಳು ಸೃಷ್ಟಿಯಾಗಲಿವೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಅಪಾರ್ಟ್ ಮೆಂಟ್ಗಳು, ಹೊಟೇಲ್ಗಳು ಆರಂಭಗೊಳ್ಳಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವಪ್ರಮೋದ್ ಮಧ್ವರಾಜ್ ಮಾತನಾಡಿ, ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಯಾದರೆ ದೇಶದ ಅಭಿವೃದ್ಧಿ ಸಾಧ್ಯ. ಇಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಚಯ ನಿರ್ಮಾಣ ಗ್ರಾಮೀಣ ಅಭಿವೃದ್ಧಿಯ ಪ್ರಥಮ ಹೆಜ್ಜೆ ಎಂದರು.

ಬೆಳ್ಕಳೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ಭಟ್ ದೀಪ ಬೆಳಗಿಸಿದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ತೆಂಕನಿಡಿಯೂರು ಗ್ರಾ.ಪಂ. ಅಧ್ಯಕ್ಷ ಕೃಷ್ಣ ಶೆಟ್ಟಿ, ಎಸ್ಸಿಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಟಿ. ಶಂಭು ಶೆಟ್ಟಿ, ಬಡಗುಬೆಟ್ಟು ಕೋ-ಆಪರೇಟಿವ್ ಸೊಸೈಟಿಯ ವ್ಯವಸ್ಥಾಪಕ ಪ್ರಬಂಧಕ ಜಯಕರ ಶೆಟ್ಟಿ ಇಂದ್ರಾಳಿ, ಮಾಂಡವಿ ಡೆವಲಪರ್ನಜೆರಿ ವಿನ್ಸೆಂಟ್, ಕಾರ್ತಿಕ್ ಎಸ್ಟೇಟ್ ಪ್ರವರ್ತಕ ಹರಿಯಪ್ಪ ಕೋಟ್ಯಾನ್, ತಾ.ಪಂ. ಸದಸ್ಯ ಧನಂಜಯ್ ಕುಂದರ್, ಕಿರಣ್ ಮಿಲ್ಕ್ ಡೇರಿಯ ಮಾಲಕ ಟಿ. ಗೋಪಾಲಕೃಷ್ಣ ಶೆಟ್ಟಿ, ವಿಜಯ ಬ್ಯಾಂಕ್ ಕೆಳಾರ್ಕಳಬೆಟ್ಟು ಶಾಖಾ ಪ್ರಬಂಧಕ ಗಣೇಶ್ ಮೆಂಡನ್, ಉಡುಪಿ ಎ.ಜಿ. ಆಸೋಸಿಯೇಟ್ಸ್ ಆರ್ಕಿಟೆಕ್ಟರ್ ಯೋಗಿಶ್ ಚಂದ್ರಧರ ಉಪಸ್ಥಿತರಿದ್ದರು.

ಅತ್ಯಾಧುನಿಕ ಸೌಕರ್ಯಗಳುಳ್ಳ ಒಂದು ಮತ್ತು ಎರಡು ಬೆಡ್‌ರೂಂ ಗಳ 20 ಫ್ಲ್ಯಾಟ್‌ಗಳಿವೆ. ಪಾರ್ಟಿ ಹಾಲ್‌, ಲಿಫ್ಟ್‌, ವಿಶಾಲವಾದ ಭದ್ರತಾ ಕಾರ್‌ ಪಾರ್ಕಿಂಗ್‌, ಎಸ್‌ಟಿಪಿ ಡ್ರೈನೇಜ್‌, ಸಿಸಿಟಿವಿ, 24 ಗಂಟೆಯೂ ಶುದ್ಧ ನೀರು, ಗ್ಯಾಸ್‌ ಸಂಪರ್ಕ, ಜನರೇಟರ್‌ ಬ್ಯಾಕ್‌ಅಪ್‌, ವಾಚ್‌ಮನ್‌, ಫ್ಲ್ಯಾಟ್ ಖರೀದಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಇವೆ ಎಂದು ರಾಧ್ಮಾ ರೆಸಿಡೆನ್ಸಿಯ ಪ್ರವರ್ತಕ ಪ್ರಖ್ಯಾತ್‌ ಶೆಟ್ಟಿ ಬೆಳ್ಕಳೆ ಬಡಾಮನೆ ತಿಳಿಸಿದ್ದಾರೆ.

ಪ್ರಖ್ಯಾತ್ ಶೆಟ್ಟಿ ತೆಂಕನಿಡಿಯೂರು ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


Spread the love